ಬೆಂಗಳೂರು: ಕರ್ನೂಲ್‌ನಲ್ಲಿ ನಡೆದ ಕಾವೇರಿ ಟ್ರಾವೆಲ್ಸ್‌ನ ಎಸಿ ಸ್ಲೀಪರ್ ಬಸ್‌ನ ಭೀಕರ ಅಪಘಾತ ಸಂಭವಿಸಿದ ಬೆನ್ನಲ್ಲೇ ಪ್ರಯಾಣಿಕರು ಖಾಸಗಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.
ಅಂದು ಕಾವೇರಿ ಟ್ರಾವೆಲ್ಸ್‌ನ ಬಸ್ ಚಾಲಕ ಅತಿವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಕಾರಣದಿಂದಾಗಿಯೇ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಕಾಣಿಸದೇ ಅಪಘಾತ ಸಂಭವಿಸಿತ್ತು. ರಸ್ತೆಯ ವೇಗ ಮಿತಿಗೆ ತಕ್ಕ ಹಾಗೆ ಅಥವಾ ಮಳೆ ಬರುತ್ತಿದ್ದ ಕಾರಣವಾದ್ದರಿಂದ ಪರಿಸ್ಥಿತಿಗೆ ತಕ್ಕನಾಗಿ ನಿಧಾನವಾಗಿ ಬಸ್ ಚಾಲನೆ ಮಾಡಿದ್ದರೆ ಆ ಅಪಘಾತ ಸಂಭವಿಸುತ್ತಿರಲಿಲ್ಲ.
ಹೀಗೆ ಅತಿವೇಗದಿಂದ 20 ಮಂದಿಯ ಪ್ರಾಣ ತೆಗೆದ ಬಸ್ ಡ್ರೈವರ್ ಸದ್ಯ ಕಂಬಿ ಹಿಂದಿದ್ದಾನೆ. ಈ ಘಟನೆಯ ಬಳಿಕ ಹಲವೆಡೆ ಖಾಸಗಿ ಸ್ಲೀಪರ್ ಬಸ್‌ಗಳ ವಿರುದ್ಧ ದೂರುಗಳು ಬಂದಿವೆ. ಹಾಗೆಯೇ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಆರ್‌ಎಲ್ ಸಂಸ್ಥೆಯ ಬಸ್ ಡ್ರೈವರ್ ಓರ್ವ ವೇಗವಾಗಿ ಬಸ್ ಚಾಲನೆ ಮಾಡುತ್ತಾ ಸ್ಟೇರಿಂಗ್ ಕೆಳಗೆ ಮೊಬೈಲ್ ಇಟ್ಟು ಅದರಲ್ಲಿ ಕನ್ನಡ ಬಿಗ್‌ಬಾಸ್ ವೀಕ್ಷಣೆ ಮಾಡಿದ್ದಾನೆ.
ಈ ಘಟನೆಯನ್ನು ಪ್ರಯಾಣಿಕರೊಬ್ಬರು ಹಿಂಬದಿಯಿಂದ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಡ್ರೈವರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಕಾಮೆಂಟ್ ಮಾಡಿ ವಿಆರ್‌ಎಲ್ ಸಂಸ್ಥೆಯ ಖಾತೆಯನ್ನು ಉಲ್ಲೇಖಿಸಿದ್ದರು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಿಆರ್‌ಎಲ್ ಸಂಸ್ಥೆ ಸ್ಮಿರ್ಕಿಫೈ ಹಂಚಿಕೊಂಡಿದ್ದ ವೈರಲ್ ವಿಡಿಯೊಗೆ ಕಾಮೆಂಟ್ ಮಾಡಿದ್ದು, ಈ ದೂರಿನ ಅನ್ವಯ ಸಂಬಂಧಪಟ್ಟ ಚಾಲಕನನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿಜಯಾನಂದ ಸಂಸ್ಥೆಯ ಟ್ರಾವೆಲ್ಸ್ ವಿಭಾಗದಲ್ಲಿ 1300 ಚಾಲಕರು ಹಾಗೂ ಲಾಜಿಸ್ಟಿಕ್ ವಿಭಾಗದಲ್ಲಿ 10000ಕ್ಕೂ ಹೆಚ್ಚು ಚಾಲಕರಿದ್ದು, ನಾವು ಆಗಾಗ ಪ್ರಯಾಣಿಕರ ಸುರಕ್ಷತೆ ಹಾಗೂ ಜಾಗರೂಕತೆಯ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುತ್ತೇವೆ. ಇಂತಹ ಘಟನೆಗಳು ತೀರ ವಿರಳ, ಇದನ್ನು ಗಮನಕ್ಕೆ ತಂದದ್ದಕ್ಕೆ ಧನ್ಯವಾದಗಳು. ನಾವು ಚಾಲನೆ ವೇಳೆ ಮೊಬೈಲ್ ಬಳಸದಂತೆ ನಿಯಮವನ್ನು ಈ ಹಿಂದೆಯೇ ತಂದಿದ್ದೇವೆ. ಮತ್ತೊಮ್ಮೆ ಇಂತಹ ಕೆಟ್ಟ ಅನುಭವಕ್ಕೆ ಕ್ಷಮೆ ಯಾಚಿಸುತ್ತೇವೆ, ಸುರಕ್ಷತೆ ಕಾಪಾಡುವಲ್ಲಿ ಸಹಾಯ ಮಾಡಿದ ತಮಗೆ ಧನ್ಯವಾದಗಳು ಎಂದು ಬರೆದುಕೊಂಡಿದೆ.
https://www.instagram.com/reel/DQv3mgnkfDk/?igsh=NjFzdjllZTV4MnJ4
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


