Monday, November 2, 2026
spot_img
More
    spot_img
    HomeTop Storyಡಿಸೆಂಬರ್‌ 12ರಿಂದ ಗೊಮ್ಮಟಗಿರಿಯ ಬಾಹುಬಲಿಗೆ ಭವ್ಯ ಮಜ್ಜನ

    ಡಿಸೆಂಬರ್‌ 12ರಿಂದ ಗೊಮ್ಮಟಗಿರಿಯ ಬಾಹುಬಲಿಗೆ ಭವ್ಯ ಮಜ್ಜನ

    ಕಣ್ಣು ಹಾಯಿಸಿದಷ್ಟು ದೂರಕ್ಕೆ ಹಸಿರು ಹೊದ್ದು ಮಲಗಿರುವ ಭೂ ರಮೆ, ಮತ್ತೊಂದೆಡೆ ಕೆಆರ್ ಎಸ್ ಹಿನ್ನೀರಿನ ಜಲರಾಶಿ. ಇಂತಹ ಸೌಂದರ್ಯದ ನಡುವೆ ಹೆಬ್ಬಂಡೆಯ ಮೇಲೆ ವಿರಾಜಮಾನನಾಗಿ ನಿಂತಿರುವ 16 ಅಡಿ ಎತ್ತರದ ಏಕಶಿಲೆಯ ಗೊಮ್ಮಟಮೂರ್ತಿಗೆ ಡಿ. 12ರಿಂದ 15ರ ವರೆಗೆ 75ನೇ ವರ್ಷದ ಅಮೃತ ಮಹೋತ್ಸವ ಮಹಾ ಮಸ್ತಕಾಭಿಷೇಕ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.

    ಮೈಸೂರಿಗೆ ಸಮೀಪವಿದ್ದರೂ ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿಗೆ ಸೇರಿರುವ ಬೆಟ್ಟದೂರು (ಗೊಮ್ಮಟಗಿರಿ) ಗ್ರಾಮದಲ್ಲಿನ ಬೃಹತ್ ಬೆಟ್ಟದ ಮೇಲೆ ಕಪ್ಪು ಶಿಲೆಯಲ್ಲಿ ಕಡೆದು ನಿಲ್ಲಿಸಿರುವ ಗೊಮ್ಮಟ ಮೂರ್ತಿಗೆ ಪ್ರತಿವರ್ಷ ಶ್ರೀ ಗೊಮ್ಮಟಗಿರಿ ಸೇವಾ ಸಮಿತಿ ವತಿಯಿಂದ ಮಸ್ತಕಾಭಿಷೇಕ ನಡೆಸಲಾಗುತ್ತದೆ.

    ಗೊಮ್ಮಟೇಶ್ವರ ಮೂರ್ತಿಯನ್ನು ಕಡೆದಿರುವ ಬಂಡೆಯ ತಪ್ಪಲಿನಲ್ಲಿ ೨೪ ಜೈನ ತೀರ್ಥಂಕರರ ಪುಟ್ಟ ಬಸದಿಗಳಿವೆ. ಬೃಹತ್ ಬಂಡೆಯ ಮೇಲೆ ನಿಂತರೆ ಸುತ್ತಲಿನ ಜಮೀನುಗಳ ಹಸಿರು ಪರಿಸರ, ಕಣ್ಣಳತೆ ದೂರದಲ್ಲಿ ಕೆಆರ್‌ಎಸ್ ಜಲಾಶಯದ ಹಿನ್ನೀರು ಮುದ ನೀಡುತ್ತದೆ.

    ನಾಲ್ಕು ದಿನಗಳವರೆಗೆ ವಿವಿಧ ಕಾರ್ಯಕ್ರಮ: ಆರ್ಯಿಕಾ ೧೦೫ ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕನಕಗಿರಿ ಜೈನಮಠದ ಪೀಠಾಧಿಪರಿ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಾಲ್ಕು ದಿನಗಳ ಕಾಲ ಪೂಜಾ ಕಾರ್ಯ ಹಾಗೂ ಮಹಾ ಮಸ್ತಕಾಭಿಷೇಕ ನಡೆಯಲಿದೆ.

    ಡಿ. ೧೨ರಂದು ಬೆಳಿಗ್ಗೆ ೬ ಗಂಟೆಗೆ ಮಂಗಳಾಷ್ಟಕರ, ಮಹಾಮಂತ್ರ ಪಠಣೆ, ನಾಂದಿ ಮಂಗಲ, ೭. ೩೦ಕ್ಕೆ ಜಲಮಂದಿರದಲ್ಲಿ ನಿತ್ಯಪೂಜೆ, ಪಂಚಾಮೃತಾಭಿಷೇಕ, ಬೆಳಿಗ್ಗೆ ೧೧ರಿಂದ ೨೪ ತೀರ್ಥಂಕರರ ಕೂಟ ಗಳಲ್ಲಿ ಸಾಮೂಹಿಕ ಪೂಜೆ, ಮಧ್ಯಾಹ್ನ ೧೨ರಿಂದ ಬೆಟ್ಟದಲ್ಲಿ ನವಗ್ರಹ ಆರಾಧನೆ, ಭಗವಾನ್ ಬಾಹು ಬಲಿ ಸ್ವಾಮಿಗೆ ಎಣ್ಣೆ ಮಜ್ಜನ, ಶ್ರೀ ಬ್ರಹ್ಮದೇವರಿಗೆ ಷೋಡಶೋಪಚಾರ ಪೂಜೆ ನೆರವೇರಲಿದೆ.

    ಡಿ. ೧೩ರಂದು ಬೆಳಿಗ್ಗೆ ೧೧ಕ್ಕೆ ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದವರಿಂದ ಮಹಾ ಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಕಾರ್ಯಕ್ರಮವನ್ನು ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ. ಡಿ. ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

    ಡಿ. ೧೪ರಂದು ಬೆಳಿಗ್ಗೆ ೧೦. ೩೦ಕ್ಕೆ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಉದ್ಘಾಟಿಸಲಿದ್ದು, ಸಚಿವರಾದ ಕೃಷ್ಣ ಭೈರೇಗೌಡ, ಈಶ್ವರ ಖಂಡ್ರೆ ಮತ್ತಿತರರು ಭಾಗವಹಿಸಲಿದ್ದಾರೆ.

    ಡಿ. ೧೫ರಂದು ಬೆಳಿಗ್ಗೆ ೧೧ಕ್ಕೆ ಸಮಸ್ತ ಭಟ್ಟಾರಕರ ಉಪಸ್ಥಿತಿಯಲ್ಲಿ ಮಹಾ ಮಸ್ತಕಾಭಿಷೇಕ ಹಾಗೂ ಬೃಹತ್ ಸಮವಸರಣ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಡಿ. ೧೩ರಿಂದ ೧೫ರವರೆಗೆ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search