ದುಬೈ: ನಿನ್ನೆ ( ಮಾರ್ಚ್ 9 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್‌ಗಳ ಗೆಲುವು ಕಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.
50 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254ರನ್ ಬಾರಿಸಿತು.
ಈ ಗೆಲುವಿನ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದು, ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿದೆ.
ಕಳೆದ ವರ್ಷ ಟಿ ಟ್ವೆಂಟಿ ವಿಶ್ವಕಪ್ ಹಾಗೂ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿರುವ ಭಾರತ ತಂಡ ಸದ್ಯ ವಿಶ್ವ ಕ್ರಿಕೆಟ್‌ನ ಅಧಿಪತಿಯಾಗಿದೆ. ಈ ಎರಡೂ ಟೂರ್ನಿಗಳಲ್ಲಿಯೂ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ರೋಹಿತ್ ಶರ್ಮಾ ಬೃಹತ್ ಸಾಧನೆ ಮಾಡಿ ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲೊಬ್ಬರು ಎನಿಸಿಕೊಂಡಿದ್ದಾರೆ.
ಇನ್ನು ಕಳೆದ ಟಿ ಟ್ವೆಂಟಿ ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಹಾಗೆ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ರೋಹಿತ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಎಂಬ ಸುದ್ದಿಗಳು ಹರಿದಾಡಿದ್ದವು.
ಈ ಸುದ್ದಿಗಳ ಪಂದ್ಯ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ನಾನು ನಿಮಗೆ ಒಂದು ವಿಷಯವನ್ನು ಹೇಳಲೇಬೇಕು. ನಾನು ಏಕದಿನ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಯಾವುದೇ ರೀತಿಯ ವದಂತಿಗಳು ಬೇಡ ಮುಂದೆ ಹೋಗೋಣ” ಎಂದು ಪತ್ರಿಕಾಗೋಷ್ಟಿಯಲ್ಲಿದ್ದವರಿಗೆ ಹೇಳಿದ್ದಾರೆ. ಈ ಮೂಲಕ ನಿವೃತ್ತಿಯ ಅಂತೆಕಂತೆಗಳಿಗೆ ತೆರೆ ಎಳೆದಿದ್ದಾರೆ. ಅಲ್ಲಿಗೆ ಮುಂದಿನ ವಿಶ್ವಕಪ್‌ನಲ್ಲೂ ಆಡುವುದನ್ನು ರೋಹಿತ್ ಪರೋಕ್ಷವಾಗಿ ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


