ಎಲ್ಲವೂ ಸರಿಹೋಯಿತು, ಅಮೆರಿಕ ಮತ್ತು ಭಾರತದ ಸಂಬಂಧ ಮತ್ತೆ ಹಳಿಗೆ ಮರಳುತ್ತದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾಗಲೇ ಡೊನಾಲ್ಡ್ ಟ್ರಂಪ್ ತಮ್ಮ ‘ನರಿ ಬುದ್ಧಿ’ ಪ್ರದರ್ಶಿಸಿದ್ದಾರೆ. ಭಾರತವು ಅಮೆರಿಕದ ಮಿತ್ರ ಎಂದು ಸಾರ್ವಜನಿಕವಾಗಿ ಹೇಳುತ್ತಲೇ, ತೆರೆಮರೆಯಲ್ಲಿ ಅದನ್ನು ಬಲಿಪಶು ಮಾಡಲು ಹೊರಟಿದ್ದಾರೆ.
ರಷ್ಯಾವನ್ನು ಬಗ್ಗಿಸಲು ಅದರ ವಿರುದ್ಧದ ಸಮರಕ್ಕೆ ಭಾರತ ಮತ್ತು ಚೀನಾವನ್ನು ಸುಂಕಗಳ ಅಸ್ತ್ರವಾಗಿ ಬಳಸಿಕೊಳ್ಳುವ ಹೊಸ ತಂತ್ರವನ್ನು ಟ್ರಂಪ್ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಸಭೆಯಲ್ಲಿ ಮಂಡಿಸಿದ್ದಾರೆ.
ಈ ದೇಶಗಳ ಮೇಲೆ ಶೇ. 100ರಷ್ಟು ಸುಂಕವನ್ನು ಹೇರಲು ಯುರೋಪಿಯನ್ ಒಕ್ಕೂಟಕ್ಕೆ ಅವರು ಒತ್ತಾಯಿಸಿದ್ದಾರೆ. ರಷ್ಯಾದ ಯುದ್ಧ ಯಂತ್ರಕ್ಕೆ ಭಾರತ ಮತ್ತು ಚೀನಾ ಆಮದು ಮಾಡಿಕೊಳ್ಳುತ್ತಿರುವ ತೈಲವೇ ಪ್ರಮುಖ ಹಣಕಾಸು ಮೂಲ ಎಂದು ಟ್ರಂಪ್ ವಾದಿಸಿದ್ದಾರೆ.
ಕಳೆದ ತಿಂಗಳು, ಅಮೆರಿಕವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಕಾರಣಕ್ಕೆ ಭಾರತದ ಮೇಲೆ ಈಗಾಗಲೇ ಇದ್ದ ಶೇ. 25ರಷ್ಟು ಸುಂಕಕ್ಕೆ ಹೆಚ್ಚುವರಿಯಾಗಿ ಮತ್ತೇ ಶೇ. 25ರಷ್ಟು ಸುಂಕ ವಿಧಿಸಿತ್ತು. ಆದರೆ, ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಗ್ಗಲಿಲ್ಲ.
ಇದರ ನಂತರವೇ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಭಾರತವನ್ನು ಉತ್ತಮ ಸ್ನೇಹಿತ ಎಂದು ಹೊಗಳಿದ್ದರು. ಅದಕ್ಕೆ ಮೋದಿ ಕೂಡ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಈ ಸೌಹಾರ್ದದ ಮಾತುಗಳ ಹಿಂದೆಯೇ ಇಂತಹ ಕಠಿಣ ಬೇಡಿಕೆ ಇಟ್ಟಿರುವುದು ಇದೀಗ ಬಯಲಾಗಿದೆ.
ಟ್ರಂಪ್ ಅವರ ಆಪ್ತ ಸಲಹೆಗಾರ ಪೀಟರ್ ನವರೊ ಅವರು ಭಾರತದ ಬಗ್ಗೆ ನೀಡಿದ್ದ ಆಕ್ರಮಣಕಾರಿ ಹೇಳಿಕೆಗಳು ಕೂಡ ಇದೇ ಧೋರಣೆಯನ್ನು ಸೂಚಿಸುತ್ತವೆ. ನವರೊ ಅವರು ಭಾರತವನ್ನು ಸುಂಕಗಳ ಮಹಾರಾಜ ಎಂದು ಬಣ್ಣಿಸಿದ್ದು, ರಷ್ಯಾದ ತೈಲ ಖರೀದಿಯಿಂದ ಭಾರತ ಲಾಭ ಗಳಿಸುತ್ತಿದೆ ಎಂದು ಟೀಕಿಸಿದ್ದರು.
ಅವರ ಪ್ರಕಾರ, ಬ್ರಿಕ್ಸ್ ರಾಷ್ಟ್ರಗಳ ವ್ಯಾಪಾರ ಪದ್ಧತಿಗಳು ರಕ್ತಪಿಶಾಚಿಗಳಿದ್ದಂತೆ. ಇದು ಟ್ರಂಪ್ ಆಡಳಿತದ ಸೌಹಾರ್ದದ ಮಾತುಗಳ ಹಿಂದಿರುವ ಕಠಿಣ ವಾಸ್ತವವನ್ನು ತೋರಿಸುತ್ತದೆ.
ಒಟ್ಟಾರೆ, ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಪುಟಿನ್ ಮೇಲೆ ಒತ್ತಡ ಹೇರುವ ಟ್ರಂಪ್ ಅವರ ಪ್ರಯತ್ನಗಳಿಗೆ ಭಾರತವು ಬಲಿಪಶುವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಸದ್ಯ, ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ರಷ್ಯಾದ ದಾಳಿಗಳು ತೀವ್ರಗೊಂಡಿದ್ದು, ಈ ಬೆಳವಣಿಗೆಗಳ ನಡುವೆ ಟ್ರಂಪ್ ಆಡಳಿತದ ಈ ಹೊಸ ನಡೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಹೊಸ ತಿರುವನ್ನು ತಂದಿದೆ.
ಮೋದಿ-ಟ್ರಂಪ್ ಸ್ನೇಹ ಮಾತುಕತೆ: ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಬಲ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


