ಹೊಸದಿಲ್ಲಿ : ದೆಹಲಿಯ ಕೆಂಪು ಕೋಟೆ ಬಳಿಯ ಲಾ ಕಿಲ್ಲಾ ಮೆಟ್ರೊ ನಿಲ್ದಾಣದ ಬಳಿ ನಿಂತಿದ್ದ ಕಾರುಗಳು ಸ್ಪೋಟಗೊಂಡಿವೆ. ಪರಿಣಾಮ ಕನಿಷ್ಟ 8 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
ಸ್ಪೋಟದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಜೆ 6.55ರ ಸುಮಾರಿಗೆ ಸ್ಫೋಟಕ ಸಂಭವಿಸಿದ್ದು ಏಳೆಂಟು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿದ್ದು ರಕ್ಷಣಾ ಕಾರ್ಯ ಆರಂಭಿಸಿವೆ. ಇನ್ನು ಜನನಿಬಿಡ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದ್ದರಿಂದ ಹಲವು ಮಂದಿ ಈ ಭೀಕರ ಘಟನೆಯನ್ನು ಕಣ್ಣಾರೆ ಕಂಡಿದ್ದು, ಮಾಧ್ಯಮಗಳ ಮುಂದೆ ತಾವು ಕಂಡ ಭೀಕರ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.
ಸ್ಪೋಟ ಸಂಭವಿಸದ ಕಾರಿನ ಸಮೀಪದಲ್ಲೇ ಇದ್ದು ಸಣ್ಣಪುಟ್ಟ ಗಾಯಗಳಾಗಿ ಸಾವಿನ ಅಂಚಿನಿಂದ ಪಾರಾದ ಆಟೊ ಡ್ರೈವರ್ ಜೀಶನ್ ಎಂಬುವರು ಮಾತನಾಡಿದ್ದು, ʼಕಾರು ನನ್ನಿಂದ ಕೇವಲ 2 ಅಡಿ ಅಂತರದಲ್ಲಿತ್ತು. ಅದು ಬಾಂಬ್ ಅಥವಾ ಏನೆಂಬುದು ನನಗೆ ಗೊತ್ತಾಗಲಿಲ್ಲ, ಆದರೆ ಸ್ಪೋಟ ಭೀಕರವಾಗಿತ್ತು. ಅದು ಸ್ವಿಫ್ಟ್ ಡಿಝೈರ್ ಕಾರಾಗಿತ್ತುʼ ಎಂದಿದ್ದಾರೆ.
ಮತ್ತೋರ್ವ ಪ್ರತ್ಯಕ್ಷದರ್ಶಿ ಇರ್ಫಾನ್ ಮಾತನಾಡಿ ಸ್ಪೋಟವನ್ನು ಕಣ್ಣಾರೆ ಕಂಡೆ, ಸ್ಪೋಟಗೊಂಡ ರಭಸಕ್ಕೆ ಮತ್ತೆ ಅದರ ಬಳಿ ಹೋಗಲು ಭಯವಾಗುತ್ತಿತ್ತು. ಸ್ಪೋಟದಲ್ಲಿ ಕೆಲ ಮನುಷ್ಯರು ಬಲಿಯಾದದ್ದನ್ನು ಕಂಡೆ ಹಾಗೂ ಕೂಗಿಕೊಂಡೆ. ಸನಿಹಕ್ಕೆ ಹೋಗುತ್ತಿದ್ದಂತೆ ರಸ್ತೆಯಲ್ಲಿ ಮಾನವನ ಕೈ ಹಾಗೂ ತಲೆ ಬಿದ್ದಿರುವುದನ್ನು ಕಂಡು ಭಯಭೀತನಾದೆ ಎಂದಿದ್ದಾರೆ.
ಮತ್ತೋರ್ವ ಪ್ರತ್ಯಕ್ಷದರ್ಶಿ ಮಾತನಾಡಿ ನನ್ನ ಜೀವನದಲ್ಲಿಯೇ ಇಂತಹ ಸ್ಪೋಟವನ್ನು ನಾನು ಯಾವತ್ತೂ ಕಂಡಿಲ್ಲ. ಸ್ಪೋಟದ ಭೀಕರತೆ ಕಂಡು ನಾವೆಲ್ಲ ಬದುಕುವುದಿಲ್ಲವೇನೋ ಎನಿಸಿಬಿಟ್ಟಿತು. ಭೂಕಂಪ ಮಾದರಿಯಲ್ಲಿ ಸ್ಪೋಟ ಸಂಭವಿಸಿತು. ಕೂಡಲೇ ನಾವೆಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಬಿಟ್ಟೆವು ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


