ಕರ್ನಾಟಕದ ಕಾಂಗ್ರೆಸ್ ಶಾಸಕನಿಗೆ ಅಕ್ರಮ ಗಣಿಗಾರಿಕೆ ಪ್ರಕರಣ ಇನ್ನಿಲ್ಲದಂತೆ ಕಾಡುತ್ತಿದೆ. ಒಂದು ಕಡೆ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಮತ್ತೊಂದು ಕಡೆ ವಿಚಾರಣೆಗೆ ಸಹಕಾರ ನೀಡದ ಹಿನ್ನಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.
ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಉದ್ಯಮಿಯೂ ಆಗಿರುವ ಅವರು ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು. ಈ ಕಂಪನಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಡಿ, ಸಿಬಿಐ ತನಿಖೆ ನಡೆಯುತ್ತಿದೆ.
ಬೇಲೆಕೇರಿ ಬಂದರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ವಶಕ್ಕೆ ಪಡೆದು ಸಂಗ್ರಹ ಮಾಡಿದ್ದ 5 ಲಕ್ಷದಷ್ಟು ಅದಿರಿನಲ್ಲಿ 1.54 ಲಕ್ಷ ಟನ್ ಅದಿರನ್ನು ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಚೀನಾಗೆ ರಫ್ತು ಮಾಡಿದೆ.
ಇದು ಅಕ್ರಮ ಸಾಗಾಟವಾಗಿದ್ದು, ಚೀನಾದಲ್ಲಿ ಮತ್ತೊಂದು ಕಂಪನಿಯನ್ನು ತೆರೆದು ಅದು ಖರೀದಿ ಮಾಡಿದಂತೆ ದಾಖಲೆ ತಯಾರು ಮಾಡಲಾಗಿದೆ. ಆದರೆ ವಾಸ್ತವವಾಗಿ ಅದಿರು ಮಾರಾಟ ಮಾಡಿರುವುದು ಬೇರೆ ಕಂಪನಿಗೆ. ಈ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಇಡಿ, ಸಿಬಿಐ ನಡೆಸುತ್ತಿದೆ.
21 ಕೋಟಿ ಆಸ್ತಿ ಮುಟ್ಟುಗೋಲು: ಶಾಸಕ ಸತೀಶ್ ಸೈಲ್ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಅದಿರು ರಫ್ತು ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಶಾಸಕರಿಗೆ ಸೇರಿದ 21 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ಬೆಂಗಳೂರು ವಿಭಾಗ 6/11/2025ರಂದು ಪಿಎಂಎಲ್‌ಎ, 2002ರ ಅಡಿ ಸತೀಶ್ ಸೈಲ್ ಮತ್ತು ಇತರರು ಸೇರಿ ಅದಿರು ರಫ್ತು ಮಾಡಿರುವ ಪ್ರಕರಣದಲ್ಲಿ ಗೋವಾದಲ್ಲಿ ಶಾಸಕರಿಗೆ ಸೇರಿದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಈ ಆಸ್ತಿಗಳಲ್ಲಿ ಗೋವಾದ ವಾಸ್ಕೋಡಾಗಾಮ ಅವರ್ ಲೇಡಿ ಮರ್ಸಸ್ ವಾಣಿಜ್ಯ ಸಂಕೀರ್ಣ, ದಕ್ಷಿಣ ಗೋವಾದ ಮರ್ಮಗಾವೋ ತಾಲೂಕಿನ ವಿವಿಧ ಕಡೆ ಇರುವ ಕೃಷಿ ಜಮೀನು, ನಿವೇಶನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಜಾಮೀನು ರದ್ದು: ಜಾರಿ ನಿರ್ದೇಶನಾಲಯ ಮತ್ತೊಂದು ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ಶಾಸಕ ಸತೀಶ್ ಸೈಲ್ ಬಂಧಿಸಿತ್ತು. ಅನಾರೋಗ್ಯದ ಕಾರಣ ಅವರು ಜಾಮೀನು ಪಡೆದು ಆಚೆ ಬಂದಿದ್ದಾರೆ. ಆದರೆ ವೈದ್ಯಕೀಯ ಕಾರಣದಲ್ಲಿ ಶಾಸಕರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನು ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಸೆಷನ್ಸ್ ನ್ಯಾಯಾಲಯ ರದ್ದುಗೊಳಿಸಿದೆ.
ಅಲ್ಲದೇ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಶಾಸಕರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಸತೀಶ್ ಸೈಲ್ ಮತ್ತು ಇತರರ ವಿರುದ್ಧ ಸಿಬಿಐ ದಾಖಲಿಸಿದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ವಾರೆಂಟ್ ಜಾರಿಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ವಕೀಲರು ಶಾಸಕರು ಧಾರವಾಡಕ್ಕೆ ತೆರಳಿದ್ದಾರೆ. ಆದ್ದರಿಂದ ಇಂದು ವಿಚಾರಣೆಗೆ ಗೈರಾಗಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಆದರೆ ಕೋರ್ಟ್ ಇದು 2014ರ ಪ್ರಕರಣ, ಹಲವು ಬಾರಿ ಅವರ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿತು. ಸಾಕ್ಷಿಗಳ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಎಲ್ಲಾ ಆರೋಪಿಗಳು ಹಾಜರಿದ್ದಾರೆ. ಆದರೆ ಇಬ್ಬರು ಆರೋಪಿಗಳ ಗೈರು ಮನ್ನಿಸಲಾಗದು ಎಂದು ಕೋರ್ಟ್ ಹೇಳಿತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


