ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ಗೆ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪದಡಿ ಕೆಎಸ್ಆರ್ಟಿಸಿ ಬಸ್ ಚಾಲಕನೋರ್ವನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಮಡಿಕೇರಿ ಘಟಕದಲ್ಲಿ ಚಾಲಕನಾಗಿರುವ ವೇಣುಗೋಪಾಲ್ ಬಂಧಿತ ಆರೋಪಿ. ಚಾಲಕ ಕಮ್ ನಿರ್ವಾಹಕ ರೂಪೇಶ್ ಮೇಲೆ ಗುಂಡು ಹಾರಿಸಲು ಯತ್ನಿಸಿದ ಆರೋಪದಡಿ ವೇಣುಗೋಪಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ವೇಣುಗೋಪಾಲ್ ಮಡಿಕೇರಿಯಿಂದ ಮೃತ್ಯುಂಜಯ ದೇವಾಲಯಕ್ಕೆ ತೆರಳುವ ಕೆಎಸ್ಆರ್ಟಿಸಿ ಬಸ್ನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಹಿಂದೆಯೂ ವೇಣುಗೋಪಾಲ್ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವ್ಯವಸ್ಥಾಪಕರಿಗೆ ದೂರು ಬಂದಿತ್ತು ಎನ್ನಲಾಗಿದೆ. ಇತ್ತೀಚೆಗೆ ವೇಣುಗೋಪಾಲ್ ಪಟ್ಟಣ ಭಾಗದಲ್ಲೇ ಮೊಬೈಲ್ ಬಳಸಿ ಬಸ್ ಚಲಾಯಿಸುತ್ತಿರುವ ಸಂಬಂಧ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕರು ವೇಣುಗೋಪಲ್ ಬಸ್ ಮಾರ್ಗವನ್ನು ಬದಲಾಯಿಸಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಿ.೯ರಂದು ವೇಣುಗೋಪಾಲ್ ಹಾಗೂ ರೂಪೇಶ್ ನಡುವೆ ಕಲಹವೇರ್ಪಟ್ಟಿತ್ತು ಎನ್ನಲಾಗಿದೆ. ರೂಪೇಶ್ ಕುತಂತ್ರದಿಂದ ತನ್ನ ಮಾರ್ಗ ಬದಲಾವಣೆ ಮಾಡಲಾಗಿದೆಯೆಂದು ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಅಲ್ಲದೆ, ವೇಣುಗೋಪಾಲ್ ಡಿಪೋ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ತನ್ನ ವಾಹನದಿಂದ ಸಿಂಗಲ್ ಬ್ಯಾರಲ್ ಬಂದೂಕು ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೇ ಜೀವ ಬೆದರಿಕೆ ಒಡ್ಡಿರುವುದಾಗಿ ಚಾಲಕ ರೂಪೇಶ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಮಡಿಕೇರಿ ನಗರ ಠಾಣಾ ಪೊಲೀಸರು, ಆರೋಪಿ ವೇಣುಗೋಪಾಲನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


