ಸದ್ಯ ರಾಜ್ಯ ರಾಜಕೀಯದಲ್ಲಿ ಕಾಂತರಾಜು ಸಮಿತಿ ಸಿದ್ಧಪಡಿಸಿರುವ ಜಾತಿ ಗಣತಿ ವರದಿ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಕಾಂತರಾಜು ಸಮಿತಿ ವರದಿ ಸಲ್ಲಿಸಿದಾಗಿನಿಂದಲೂ ಸತತವಾಗಿ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಕಾಂಗ್ರೆಸ್ ಸರ್ಕಾರ ಸಂಪುಟದಲ್ಲಿ ವರದಿ ಮಂಡಿಸಲು ಮುಂದಾಗಿದೆ.
ಇಂದು ವರದಿ ಮಂಡನೆಯಾಗಲಿದ್ದು ಹಲವು ಚರ್ಚೆಗಳು ನಡೆಯಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಜಾತಿ ಗಣತಿ ವರದಿ ಚರ್ಚೆಗೆಂದು ಏಪ್ರಿಲ್ 17ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ ಎಂಬ ಮಾತುಗಳು ಕೇಳಿಬಂದಿವೆ.
ಸಂಪುಟ ಸಭೆಯ ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜಾತಿ ಗಣತಿ ವರದಿಯ ಬಗ್ಗೆ ಮಾತನಾಡಿದ್ದು, ಇಂದು ಜಾತಿಗಣತಿ ಬಗ್ಗೆ ಯಾವುದೇ ಚರ್ಚೆಗಳೂ ಸಹ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಈ ಸಮೀಕ್ಷೆಯನ್ನು ಸಾಮಾಜಿಕ ಆರ್ಥಿಕ ಸಮೀಕ್ಷೆ ಎಂದಿರುವ ಈಶ್ವರ್ ಖಂಡ್ರೆ ಮುಂದಿನ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ಆಗಲಿದೆ ಎಂದಿದ್ದಾರೆ. ಎಲ್ಲ ಸಮುದಾಯದವರ ಜೊತೆ ಚರ್ಚೆ ಮಾಡಿ, ಸಾಧಕ ಬಾಧಕಗಳನ್ನು ನೋಡಿಕೊಂಡು ಸಚಿವ ಸಂಪುಟ ತೀರ್ಮಾನವನ್ನು ಮಾಡಲಿದೆ ಎಂದಿದ್ದಾರೆ.
ಇನ್ನು ಪ್ರಬಲ ಸಮುದಾಯದವರು ಈ ವರದಿ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಎಂಬುದರ ಕುರಿತು ಸಹ ಪ್ರತಿಕ್ರಿಯಿಸಿದ ಖಂಡ್ರೆ ಈ ವರದಿ ಬಗ್ಗೆ ಕೆಲ ಸಮುದಾಯಗಳಲ್ಲಿ ಆತಂಕ ಇದೆ ಎಂದರು ಹಾಗೂ ವರದಿಯಲ್ಲಿ ಏನಿದೆ ಎಂಬುದು ಬಹಿರಂಗವಾದ ಬಳಿಕ ಅಧ್ಯಯನ ಮಾಡಿ ಇದು ಸರಿ ಇದೆಯಾ, ವೈಜ್ಞಾನಿಕವಾಗಿ ಆಗಿದೆಯಾ ಎಂಬುದನ್ನು ಪರಿಶೀಲಿಸಬಹುದು, ಈಗಲೇ ವಿರೋಧ ಸರಿಯಲ್ಲ ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


