ಬೆಳಗಾವಿ: ಕಳೆದ ಎರಡು ದಿನಗಳಿಂದ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಜನರಿಂದ ತುಂಬಿ ತುಳುಕುತ್ತಿದ್ದ ಸುವರ್ಣ ವಿಧಾನಸೌಧ ಇಂದು (ಡಿಸೆಂಬರ್ 11) ಬಣಗುಡುತ್ತಿದೆ.
ಡಿ.9ರಿಂದ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ನಿತ್ಯ ಜನ ಜಂಗುಳಿಯಿಂದ ಕೂಡಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಹೀಗಾಗಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನವೂ ಇಲ್ಲ. ಅಧಿಕಾರಿ, ನೌಕರರ ಕಾರ್ಯವೂ ಇಲ್ಲ.
ರಜಾದಿನವಾದ್ದರಿಂದ ಸಾರ್ವಜನಿಕರು ಕೂಡ ಸುವರ್ಣಸೌಧದತ್ತ ಸುಳಿಯುತ್ತಿಲ್ಲ. ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸುವರ್ಣ ವಿಧಾನಸೌಧದ ವರೆಗೆ ಕಂಡು ಬಂದಿದ್ದು, ಭದ್ರತಾ ಸಿಬ್ಬಂದಿ ಮತ್ತು ಬ್ಯಾರಿಕೇಡ್‍ಗಳು ಮಾತ್ರ. ಹಾಗೆಯೇ ಸುವರ್ಣ ವಿಧಾನಸೌಧದಲ್ಲೂ ಭದ್ರತಾ ಸಿಬ್ಬಂದಿ. ತುರ್ತು ಕಾರ್ಯವಿದ್ದವರೂ ಮಾತ್ರ ಬೆರಳೆಣಿಕೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿತ್ಯ ಓಡಾಟ ನಡೆಸುತ್ತಿದ್ದ ಕಾರುಗಳು, ಬಸ್ಸುಗಳು ಇರಲಿಲ್ಲ. ಒಂದರ್ಥದಲ್ಲಿ ಯಾವ ಕಿರಿಕಿರಿಯೂ ಇಲ್ಲದೆ ಭದ್ರತಾ ಸಿಬ್ಬಂದಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಜನಜಂಗುಳಿಯಿಂದ ಕೂಡಿರುತ್ತಿದ್ದ ಸುವರ್ಣ ವಿಧಾನಸೌಧ ಇಂದು ಪ್ರಶಾಂತವಾಗಿದೆ, ಮೌನಾಚರಣೆ ಮಾಡಿದಂತಿದೆ.
ನಿನ್ನೆಯಷ್ಟೇ ಹೆದ್ದಾರಿಯಿಂದ ಸುವರ್ಣ ವಿಧಾನಸೌಧ ಪ್ರವೇಶಿಸಲು ಯತ್ನಿಸಿದ ಪಂಚಮಸಾಲಿ ಮೀಸಲಾತಿ ಹೋರಾಟಗಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಅದರ ಕಾವು ಇನ್ನೂ ಆರಿಲ್ಲ. ಆದರೂ ಇಂದು ಯಾವುದೇ ಪ್ರತಿಭಟನೆಯ ಕಾವಿಲ್ಲದೆ ಶಾಂತವಾಗಿದೆ.
ಇಂದು ಮತ್ತೆ ಎಂದಿನಂತೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನಗಳು ಮುಂದುವರೆಯಲಿದ್ದು, ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದಿರುವ ಲಾಠಿ ಪ್ರಹಾರದ ವಿಚಾರ ಪ್ರತಿಧ್ವನಿಸಲಿದೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈಗಾಗಲೇ ಲಾಠಿ ಪ್ರಹಾರವನ್ನು ತೀವ್ರವಾಗಿ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಒಟ್ಟಾರೆ ಚಳಿಗಾಲದ ಅಧಿವೇಶನದ ಕೇಂದ್ರ ಬಿಂದುವಾದ ಸುವರ್ಣ ವಿಧಾನಸೌಧ ಬಣಗುಡುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


