ಚಿಕ್ಕಬಳ್ಳಾಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ಬಳಿಕ 18ನೇ ವರ್ಷಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದು ಬೀಗಿದ್ದು, ಇತಿಹಾಸ ಬರೆದಿತ್ತು. ಜೂನ್ 3ರಂದು ಅಹ್ಮದಾಬಾದ್‌ನಲ್ಲಿ ಟ್ರೋಫಿ ಗೆದ್ದ ಆರ್‌ಸಿಬಿ ತಂಡ ಮಾರನೇ ದಿನ ಬೆಂಗಳೂರಿಗೆ ಆಗಮಿಸಿದಾದ ಸ್ವತಃ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಟಗಾರರನ್ನು ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಕರೆತಂದಿದ್ದರು.
ಬಳಿಕ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನ ಮಾಡಿದರು. ಈ ಸಮಯದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಹ ಉಪಸ್ಥಿತರಿದ್ದರು. ಹೀಗೆ ಭರ್ಜರಿ ಕಾರ್ಯಕ್ರಮ ಮುಗಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ.
ಈ ಅವಘಡಕ್ಕೆ ಕಾರಣ ಯಾರೆಂದು ನಿರ್ಧರಿಸಲು ಸಿಐಡಿ ತನಿಖೆಯನ್ನೂ ಸಹ ಆರಂಭವಾಗಿದೆ. ಕಾರ್ಯಕ್ರಮದ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ರಾಜ್ಯಪಾಲರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರೆಂಬ ಪ್ರಶ್ನೆ ಎದ್ದಿದೆ.
ಈ ಕುರಿತು ನಿನ್ನೆ ( ಜೂನ್ 11 ) ಮಾತನಾಡಿದ ಸಿದ್ದರಾಮಯ್ಯ ʼರಾಜ್ಯಪಾಲರು ಅವರಾಗಿಯೇ ಬಂದರು ಎಂದು ಪ್ರಚಾರವಾಗಿದೆ. ಆದರೆ ಅದು ತಪ್ಪು. ಗೋವಿಂದರಾಜು ( ಅವಘಡದ ಬಳಿಕ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡವರು ) ರಾಜ್ಯಪಾಲರಿಗೆ ದೂರವಾಣಿ ಕರೆ ಮಾಡಿ ನನಗೆ ಕೊಟ್ಟರು. ಆ ಸಂದರ್ಭದಲ್ಲಿ ನಾನೂ ಸಹ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ನೀವೂ ಬನ್ನಿ ಎಂದು ಆಹ್ವಾನಿಸಿದೆʼ ಎಂದರು.
ಅಲ್ಲದೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಂಕರ್ ಹಾಗೂ ಜಯರಾಮ್ ತಮಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು ಹಾಗೂ ರಾಜ್ಯಪಾಲರನ್ನೂ ಸಹ ಆಹ್ವಾನಿಸಿರುವುದಾಗಿ ತಿಳಿಸಿದರು ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


