ಬೆಂಗಳೂರು: ಯಾರೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೂ ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಪ್ರಚೋದನಾಕಾರಿಯಾಗಿ ಭಾಷಣ ಮಾಡುವುದು ಕೂಡ ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮದ್ದೂರು ಘಟನೆಯ ವಿಚಾರದಲ್ಲಿ ನಾವು ಮೊದಲಿಂದ ಹೇಳುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ. ಪೊಲೀಸರಿಗೆ ಬಿಡಿ, ಕಲ್ಲು ಹೊಡೆದವರನ್ನು ಹಿಡಿದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಮುಸಲ್ಮಾನ ಅಗಿರಲಿ, ಹಿಂದೂ ಆಗಿರಲಿ, ಮತ್ತೊಬ್ಬ ಆಗಿರಲಿ, ಯಾರೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೂ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಈ ವಿಚಾರವನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಅದೆಲ್ಲ ಬಿಟ್ಟು, ಇವರು ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ಮತ್ತೇ ಜನರನ್ನು ರೊಚ್ಚಿಗೆಬ್ಬಿಸುವುದು ಸರಿಯಲ್ಲ. ವೀರಾವೇಷದಲ್ಲಿ ಮಾತನಾಡಿ, ಪ್ರಚೋದನಕಾರಿ ಪದಗಳನ್ನು ಬಳಸುವುದರಿಂದ ಏನು ಸಾಧನೆ ಮಾಡುತ್ತಾರೋ? ಒಂದಂತು ನಿಜ ರಾಜಕೀಯ ಕಾರಣಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ಎಎಸ್‍ಪಿ ತಿಮಯ್ಯ ವರ್ಗಾವಣೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆಂತರಿಕವಾಗಿ ಎಲ್ಲಿ ಲೋಪ ಕಂಡಿದೆ, ಅದಕ್ಕೆ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಒಬ್ಬ ಇನ್‍ಸ್ಪೆಕ್ಟರ್ ಆಗಿರಬಹುದು, ಸಬ್ ಇನ್‍ಸ್ಪೆಕ್ಟರ್ ಆಗಿರಬಹುದು, ಅವರ ಕರ್ತವ್ಯ ಲೋಪ ಕಂಡು ಬಂದಾಗ ಇಲಾಖೆ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಇಲ್ಲಿ ಕುಳಿತು ಅದನ್ನು ನಿರ್ಧಾರ ಮಾಡುವುದಿಲ್ಲ. ಮದ್ದೂರಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದರು.
ಧರ್ಮಸ್ಥಳದ ಮೂರು ಲಾಡ್?ಜಗಳಲ್ಲಿ ನಾಲ್ಕು ಅನುಮಾನಸ್ಪದ ಸಾವುಗಳಾಗಿವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ದೂರು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೂರು ತೆಗೆದುಕೊಳ್ಳಬೇಕೆ?, ಬೇಡವೇ ಎಂಬುದನ್ನು ಎಸ್‍ಐಟಿಯವರು ಪರಿಶೀಲಿಸುತ್ತಾರೆ. ಪ್ರಕರಣ ಬೇರೆಬೇರೆ ದಿಕ್ಕಿಗೆ ಹೋಗುವಂತ ಪ್ರಯತ್ನ ನಡೆದರೆ, ಸೂಕ್ತ ತನಿಖೆ ಮಾಡುತ್ತಾರೆ ಎಂದರು.
ಯಾರೋ ಕೊಟ್ಟ ಹೇಳಿಕೆ ಮೇಲೆ ನಾವು ತೀರ್ಮಾನ ಮಾಡುವುದಿಲ್ಲ. ಎಸ್‍ಐಟಿ ಮುಂದೆ ಏನು ದೂರು ಕೊಟ್ಟಿರುತ್ತಾರೆ. ಅದಕ್ಕೆ ಸಾಕ್ಷ್ಯ ಕೊಟ್ಟಿರುತ್ತಾರೆ. ಅದೆಲ್ಲವನ್ನು ಪರಿಶೀಲಿಸಿ, ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಸರ್ಕಾರದ ಅನುಮತಿ ಬೇಕೆಂದರೆ ಕೇಳುತ್ತಾರೆ. ಸದ್ಯಕ್ಕೆ ಯಾವುದೇ ಅನುಮತಿ ಕೇಳುವುದಕ್ಕೆ ಪ್ರಣಬ್‍ಮೊಹಾಂತಿ ಬಂದಿಲ್ಲ ಎಂದರು.
ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್‍ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಇದರಿಂದ ಎಸ್‍ಐಟಿ ವೇಗ ಕಳೆದುಕೊಂಡು ಬಿಟ್ಟಿದೆ, ತನಿಖೆ ನಡೆಯುತ್ತಿಲ್ಲ ಅಂದುಕೊಳ್ಳಬಾರದು. ಅನೇಕ ವಿಚಾರಗಳಲ್ಲಿ ಸಂಪೂರ್ಣ ಮಾಹಿತಿ ಬರುವವರೆಗೂ ಎಸ್‍ಐಟಿಯವರು ನಮಗೂ ಹೇಳುವುದಿಲ್ಲ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನ ಬೆಂಬಲವಾಗಿ ನಿಂತವರನ್ನು ಬಂಧಿಸಿಲ್ಲ ಎಂಬುದಕ್ಕೆ ಉತ್ತರಿಸಿದ ಅವರು, ಯಾರನ್ನು ಬಂಧಿಸಬೇಕು, ಯಾವಾಗ ಬಂಧಿಸಬೇಕು ಎಂಬುದನ್ನು ನಾವು ಎಸ್‍ಐಟಿಯವರಿಗೆ ಹೇಳಕ್ಕಾಗುತ್ತದೆಯೇ? ಮಾಧ್ಯಮದವರು ಹೇಳಿದನ್ನು ಗಣನೆಗೆ ತೆಗೆದುಕೊಂಡು ಕೂಡಲೇ ಬಂಧಿಸಲು ಆಗುವುದಿಲ್ಲ. ಅವರಿಗೆ ಏನು ಮಾಹಿತಿ ಇದೆ, ಬೇಕಾದ ಅಗತ್ಯ ಪುರಾವೆ, ಸಾಕ್ಷ್ಯ ಸಿಗಬೇಕಲ್ಲ. ಅದನ್ನು ನೋಡಿಕೊಂಡು ಆನಂತರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಸಾಹಿತಿ ಬಾನು ಮುಷ್ತಾಕ್ ಅವರಿಗೆ ಭದ್ರತೆ ಕೊಟ್ಟೆ ಕೊಡುತ್ತೇವೆ. ಈ ಬಗ್ಗೆ ಯಾರು ಏನು ಹೇಳುವುದು ಬೇಕಾಗಿಲ್ಲ. ಭದ್ರತೆ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಯೋಮಿತಿ ಹೆಚ್ಚಳಕ್ಕೆ ಚರ್ಚೆ:
ಪೊಲೀಸ್ ಕಾನ್‍ಸ್ಟೇಬಲ್ ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆಬೇರೆ ರಾಜ್ಯದಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸುಮಾರು ವರ್ಷಗಳಿಂದ ಕಾನ್‍ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಎರಡು, ಮೂರು ವರ್ಷ ವಯೋಮಿತಿ ಹೆಚ್ಚಳ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ ನನ್ನನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಡಿಜಿಯವರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಬೇರೆ ರಾಜ್ಯದಲ್ಲಿ ವಯೋಮಿತಿ ಎಷ್ಟು ವರ್ಷ ಇದೆ. ಪರಿಶೀಲನೆ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸ್ ದಂಪತಿ ಅಂತರ್ ಜಿಲ್ಲಾ ವರ್ಗಾವಣೆ ಸರ್ಕಾರದ ಆದೇಶದಂತೆ ನಡೆಯುತ್ತಿದೆ ಎಂದು ತಿಳಿಸಿದರು.
ಕೊಲ್ಕತ್ತಾ: ಜೆಯು ಕ್ಯಾಂಪಸ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿದ್ಯಾರ್ಥಿನಿ ಸಾವು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


