Monday, November 2, 2026
spot_img
More
    spot_img
    HomeBreaking Newsಮಹಿಳಾ ನೌಕರರಿಗೆ ಋತುಚಕ್ರದ ವೇತನ ಸಹಿತ ರಜೆ: ಆದೇಶ, ಷರತ್ತುಗಳು

    ಮಹಿಳಾ ನೌಕರರಿಗೆ ಋತುಚಕ್ರದ ವೇತನ ಸಹಿತ ರಜೆ: ಆದೇಶ, ಷರತ್ತುಗಳು

    ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದಂತೆ ಮಹಿಳಾ ನೌಕರರಿಗೆ ಋತುಚಕ್ರದ ವೇತನ ಸಹಿತ ರಜೆ ಕುರಿತು ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಷರತ್ತುಗಳ ಕುರಿತು ಮಾಹಿತಿ ನೀಡಲಾಗಿದೆ.

    ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸುಮ. ಎಸ್, ಸರ್ಕಾರದ ಅಧೀನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಆದೇಶ ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ಒದಗಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

    ಪ್ರಸ್ತಾವನೆ: ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961 ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸಲು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಅಧಿಸೂಚನೆ ಹೊರಡಿಸುವ ಸಂಬಂಧ ಚರ್ಚಿಸಿ ವರದಿ ಸಲ್ಲಿಸಲು ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು, ತಜ್ಞವೈದ್ಯರು, ಕಾರ್ಮಿಕ ವರ್ಗಗಳ ಪ್ರತಿನಿಧಿಗಳು, ಕೈಗಾರಿಕಾ ಸಂಘದ ಪ್ರತಿನಿಧಿಗಳು, IT/ BT ಪ್ರತಿನಿಧಿ, ಗಾರ್ಮೆಂಟ್ಸ್ ಮಾಲೀಕರ ಪ್ರತಿನಿಧಿ, ಪ್ರಾಧ್ಯಾಪಕರು, ಸಮಾಜ ಸೇವಕರು, ಮಾಲೀಕ ವರ್ಗದ ಪ್ರತಿನಿಧಿಗಳು, ಇತರೆ ಸದಸ್ಯರುಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.

    ಸದರಿ ತಜ್ಞರ ಸಮಿತಿಯು ವಿವಿಧ ಹಂತಗಳಲ್ಲಿ ಚರ್ಚಿಸಿ ಕಾರ್ಖಾನೆಗಳು, ಪ್ಲಾಂಟೇಷನ್, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಮೊದಲಾದವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಅವರ ಋತುಚಕ್ರದ ಸಮಯದಲ್ಲಿ ವಾರ್ಷಿಕ 6 ಋತುಸ್ರಾವ ರಜೆಗಳನ್ನು ಬಳಸಿಕೊಳ್ಳಲು ‘ಋತುಚಕ್ರ ರಜಾ ನೀತಿ’ ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿದ್ದು, ಮಹಿಳಾ ನೌಕರರಿಗೆ ವೇತನ ಸಹಿತ ಋತುಸ್ರಾವದ ರಜೆ ನೀಡುವ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಅನುಕೂಲವಾಗುವಂತೆ ಕಾರ್ಖಾನೆಗಳು, ಕೈಗಾರಿಕೆಗಳು ಮತ್ತು ಇತರೆ ಉದ್ದಿಮೆಗಳ ಮಾಲೀಕರು, ವಿವಿಧ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರ ಗಮನಕ್ಕಾಗಿ ಹಾಗೂ ಸಲಹೆ, ಸೂಚನೆ, ಆಕ್ಷೇಪಣೆ/ ಅಭಿಪ್ರಾಯ ಕೋರಿ ಇಲಾಖೆಯ ವೆಬ್‌ಸೈಟ್ karmikaspandana.gov.in ಸೇರಿದಂತೆ ದಿನಾಂಕ 18-10-2025 ರಂದು ಪ್ರಕಟಿಸಲಾಗಿರುತ್ತದೆ.

    ಕಾರ್ಮಿಕರು, ಕಾರ್ಮಿಕ ಸಂಘಗಳು, ಮಾಲೀಕರು, ಮಾಲೀಕ ಸಂಘಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು, ಸರ್ಕಾರಿ ನೌಕರರ ಒಕ್ಕೂಟ ಮೊದಲಾದವರಿಂದ ಪಸ್ತಾಪಿತ ಋತುಚಕ್ರ ರಜಾನೀತಿಯ ಸಂಬಂಧ ಒಟ್ಟು 75 ಅಭಿಪ್ರಾಯಗಳು ಸ್ವೀಕೃತವಾಗಿದ್ದು, ಈ ಪೈಕಿ 56 ಅಭಿಪ್ರಾಯಗಳು ಪ್ರಸ್ತಾಪಿತ ಋತುಚಕ್ರ ರಜಾನೀತಿಯ ಪರವಾಗಿರುತ್ತವೆ. ಉಳಿದಂತೆ 19 ಅಭಿಪ್ರಾಯಗಳು ವಿರುದ್ಧವಾಗಿರುತ್ತವೆ.

    ಉದ್ದೇಶಿತ ರಜಾನೀತಿಯನ್ನು ಬೆಂಬಲಿಸಿ ಸ್ವೀಕೃತವಾದ 56 ಅಭಿಪ್ರಾಯಗಳಲ್ಲಿ, 26 ಅಭಿಪ್ರಾಯಗಳು ಮಾಲೀಕ ವರ್ಗದವರು, 7 ಕಾರ್ಮಿಕ ಸಂಘಗಳು, 19 ನೌಕರರು, 1 ಸಾರ್ವಜನಿಕರು, 1 ಸರ್ಕಾರಿ ನೌಕರರ ಒಕ್ಕೂಟ, 2 ಮಹಿಳಾ ಸಂಘಗಳು ನೀಡಿರುತ್ತಾರೆ. ಅಲ್ಲದೇ ಪ್ರಸ್ತಾಪಿತ ಋತುಚಕ್ರ ರಜಾನೀತಿಯನ್ನು ಬೆಂಬಲಿಸಿರುವ ಕಾರ್ಮಿಕ/ ಕಾರ್ಮಿಕ ಸಂಘಟನೆ/ ಮಹಿಳಾ ಸಂಘಟನೆ/ ಆಡಳಿತ ವರ್ಗದವರ 56 ಅಭಿಪ್ರಾಯಗಳಲ್ಲಿ 10 (10 ಅಭಿಪ್ರಾಯಗಳಲ್ಲಿ 4 ಆಡಳಿತ ವರ್ಗದ ಅಭಿಪ್ರಾಯಗಳು) ಅಭಿಪ್ರಾಯಗಳು ಪ್ರಸ್ತಾಪಿಸಿರುವ ವಾರ್ಷಿಕ 6 ರಜೆಗಳಿಗೆ ಬದಲಾಗಿ 12 ರಜೆಗಳನ್ನು ನೀಡುವಂತೆ ಕೋರಲಾಗಿರುತ್ತವೆ.

    ಪ್ರಸ್ತಾಪಿತ ಋತುಚಕ ರಜಾನೀತಿಯ ಪರವಾಗಿ ಹೆಚ್ಚಿನ ಅಭಿಪ್ರಾಯಗಳು ಸ್ವೀಕೃತಗೊಂಡಿರುವುದರಿಂದ ಹಾಗೂ ಸದರಿ ರಜಾನೀತಿಯನ್ನು ರೂಪಿಸುವುದರಿಂದ ವಿವಿಧ ಉದ್ದಿಮೆಗಳಲ್ಲಿ ದುಡಿಯುವ ಮಹಿಳಾ ನೌಕರರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲ್ಪಟ್ಟು, ಅವರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದಾಗಿ ಉತ್ಪಾದನಾ ಚಟುವಟಿಕೆಗಳಲ್ಲಿ ಮಹಿಳಾ ನೌಕರರ ಭಾಗವಹಿಸುವಿಕೆ ಹೆಚ್ಚಿ ದೇಶದ ಉತ್ಪಾದನೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಹಾಗೂ ಋತುಚಕ್ರದ ರಜಾನೀತಿಯನ್ನು ರೂಪಿಸುವುದರಿಂದ ಮಹಿಳಾ ದುಡಿಮೆಗೆ ಸಂಬಂಧಿಸಿದಂತೆ ಕರ್ನಾಟಕವು ಒಂದು ಜಾಗತಿಕ ಉತ್ತಮ ಅಭ್ಯಾಸವನ್ನು ಹೊಂದಿದಂತಾಗುತ್ತದೆ ಎಂದು ಆಯುಕ್ತರು, ಕಾರ್ಮಿಕ ಇಲಾಖೆ, ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

    ಸಚಿವ ಸಂಪುಟ ಟಿಪ್ಪಣಿಯಲ್ಲಿ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC ಗಳು, IT ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ, 2025 ಅನ್ನು ಜಾರಿಗೆ ತರಲು ಸಚಿವ ಸಂಪುಟವು ಅನುಮೋದಿಸಿರುತ್ತದೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

    ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಮಹಿಳಾ ನೌಕರರಿಗೆ ಅವರ ಆರೋಗ್ಯ, ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸುವ ಸದುದ್ದೇಶದಿಂದ, ಅವರ ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಸಂಬಂಧಿಸಿದ ಉದ್ಯೋಗದಾತರು ಒದಗಿಸುವಂತೆ ಆದೇಶಿಸಿದೆ.

    ಷರತ್ತುಗಳು

    • ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (carry over) ಅವಕಾಶವಿರುವುದಿಲ್ಲ.
    • ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ.

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search