ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ ಗಾಯಗೊಂಡವರು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿ, ಜನರ ಆರೋಗ್ಯದ ಕುರಿತು ಮಾಹಿತಿ ಪಡೆದರು.
ಭೂತಾನ್ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಬುಧವಾರ ಮಧ್ಯಾಹ್ನ ನವದೆಹಲಿಗೆ ಆಗಮಿಸಿದರು. ಏರ್‌ಪೋರ್ಟ್‌ನಿಂದ ಅವರು ನೇರವಾಗಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಆಗಮಿಸಿದರು. ಸ್ಪೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯ ವಿಚಾರಿಸಿದರು.
ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಮರುದಿನವೇ ಪ್ರಧಾನಿ ಮೋದಿ ಭೂತಾನ್ ಪ್ರವಾಸ ಕೈಗೊಂಡಿದ್ದನ್ನು ಹಲವಾರು ಜನರು ಟೀಕಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಸಹ ಹಾಕಲಾಗಿತ್ತು. ಆದರೆ ಭೂತಾನ್‌ನಿಂದ ಮರಳಿದ ಪ್ರಧಾನಿ ನೇರವಾಗಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಸೋಮವಾರ ಸಂಜೆ ಸ್ಪೋಟ ನಡೆದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸ್ಪೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದರು. ಜನರ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದರು.
ಮಹತ್ವದ ಸಭೆ ಕರೆದಿರುವ ಮೋದಿ: ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದ ತನಿಖೆಯನ್ನು ಕೇಂದ್ರ ಸರ್ಕಾರ ಎನ್‌ಐಗೆ ವಹಿಸಿದೆ. ಎನ್‌ಐಎ ಈ ಪ್ರಕರಣದ ತನಿಖೆಗಾಗಿಯೇ 10 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ತನಿಖೆ ಚುರುಕುಗೊಂಡಿದ್ದು, ವಿವಿಧ ರಾಜ್ಯದಲ್ಲಿ ಹಲವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.
ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಂಜೆ 5.30ಕ್ಕೆ ಮಹತ್ವದ ಸಭೆಯನ್ನು ಕರೆದಿದ್ದಾರೆ. ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಯಲಿದೆ.
ಈ ಸಭೆಯಲ್ಲಿ ಎಲ್ಲಾ ಸೇನಾಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ವಿದೇಶಾಂಗ ಸಚಿವರು, ರಕ್ಷಣಾ ಮತ್ತು ಗೃಹ ಸಚಿವರು, ಮೋದಿ ಸಂಪುಟದ ಹಿರಿಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಅಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸುವ ಮೊದಲು ಸಹ ಸಿಸಿಎಸ್ ಸಭೆ ನಡೆದಿತ್ತು.
ದೆಹಲಿ ಪ್ರಕರಣದ ಹಿಂದೆ ಯಾರ ಷಡ್ಯಂತ್ರವೇ ಇರಲಿ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭೂತಾನ್‌ನಲ್ಲಿ ಹೇಳಿದ್ದರು. ನಮ್ಮ ತನಿಖಾ ಸಂಸ್ಥೆಗಳು ಈಗಾಗಲೇ ಯಾರ ಕೈವಾಡ ಎಂದು ಆಳಕ್ಕೆ ಇಳಿದು ತನಿಖೆ ಕೈಗೊಂಡಿವೆ ಎಂದು ಮೋದಿ ಹೇಳಿದ್ದರು.
ಸಿಸಿಎಸ್ ಸಭೆಯಲ್ಲಿ ಭಾರತದ ಮುಂದಿನ ಕಾರ್ಯ ಯೋಜನೆ ಕುರಿತು ಚರ್ಚೆ ನಡೆಸಲಾಗುತ್ತದೆ. ಯಾವ ಮಾದರಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸೇನಾ ಪಡೆಗಳ ಜೊತೆ ಚರ್ಚಿಸಲಾಗುತ್ತದೆ. ಸ್ಪೋಟ ಪ್ರಕರಣದ ತನಿಖೆಯ ಕುರಿತು ಪ್ರಧಾನಿಗಳು ಮಾಹಿತಿಯನ್ನು ಸಹ ಪಡೆಯಲಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ ನಡೆದಿತ್ತು. ಈ ಸಭೆಯಲ್ಲಿ ಅವರು ಸಶಸ್ತ್ರ ಪಡೆಗಳಿಗೆ ಕಾರ್ಯಾಚರಣೆಯ ಸ್ವಾತಂತ್ರ್ಯ ನೀಡಿದ್ದರು. ರಕ್ಷಣಾ ಸಚಿವಾಲಯ ಮತ್ತು ಸೇನೆ ಎರಡೂ ಸೇರಿ ಗುರಿ, ವಿಧಾನ, ಸ್ಥಳ ಮತ್ತು ಸಮಯವನ್ನು ನಿರ್ಧರಿಸುತ್ತವೆ ಎಂದು ಹೇಳಿದ್ದರು. ಬಳಿಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆದಿತ್ತು.
ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಇಲ್ಲಿಯ ತನಕ ನಡೆದ ತನಿಖೆಯಲ್ಲಿಯೂ ಯಾರ ಕೈವಾಡವಿದೆ? ಎಂಬುದನ್ನು ಬಹಿರಂಗಗೊಳಿಸಿಲ್ಲ. ತನಿಖೆಯ ವರದಿಯನ್ನು ಇಂದಿನ ಸಭೆಯಲ್ಲಿ ಪ್ರಧಾನಿಗಳಿಗೆ ವಿವರಿಸಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


