ಬೆಂಗಳೂರು: ಹಿಂದೂಗಳು ಎರಡೇ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಮಾತನ್ನು ಮುಸ್ಲಿಮರಿಗೆ ಹೇಳುತ್ತಾರೆಯೇ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಹಿಂದೂಗಳು ಎರಡೇ ಮಕ್ಕಳು ಮಾಡಿಕೊಳ್ಳಿ ಎಂದು ಸಿಎಂ ಹೇಳಿರುವ ಉದ್ದೇಶ ನಮ್ಮ ಧರ್ಮವನ್ನು ಹಾಳು ಮಾಡುವುದಾಗಿದೆ ಎಂದು ಕಿಡಿಕಾರಿದರು.
ಹಿಂದೂಗಳು ಮದುವೆಯಾಗಿ ಎರಡು ಮಕ್ಕಳು ಮಾಡಿಕೊಳ್ಳಿ ಎಂದು ಹೇಳುವ ಸಿಎಂಗೆ ತಾಕತ್ತಿದ್ದರೆ ಮುಸ್ಲಿಮರಿಗೂ ಎರಡೇ ಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳಲಿ. ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಬೇಕೆಂಬುದು ಸಿದ್ದರಾಮಯ್ಯನವರ ಕುತಂತ್ರವಾಗಿದೆ. ಮೊದಲು ಓಲೈಕೆ ಮಾಡುವುದನ್ನು ಬಿಡಿ ಎಂದರು.
ಮೊನ್ನೆ ಸ್ವಾಮೀಜಿಗಳು ಹಿಂದೂಗಳು ಜಾಸ್ತಿ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದಕ್ಕದೆ ಕೌಂಟರ್ ಅಗಿ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ನಲ್ಲಿ ಇನ್ನೇನು ದರ ಏರಿಕೆ ಕಾದಿದೆಯೋ ಗೊತ್ತಿಲ್ಲ. ಹೀಗೆ ಆದರೆ ರಾಜ್ಯದಿಂದಲೂ ಕಾಂಗ್ರೆಸ್ ಅನ್ನು ಒದ್ದೋಡಿಸುತ್ತಾರೆ ಎಂದು ಭವಿಷ್ಯ ನುಡಿದರು.
ಜೆಡಿಎಸ್ ಶಾಸಕರ ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಸೆಳೆಯುವುದು ಇರಲಿ.ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ರೀತಿ ಏನಾದರೂ ಆಗಿ ಬಿಟ್ಟೀತು. ಬೇರೆಯವರ ಮನೆಗೆ ಬೆಂಕಿ ಹಚ್ಚುವುದು ಹೋಗಲಿ, ನಿಮ ಮನೆಗೆ ಬೆಂಕಿ ಅಂಟಿಕೊಂಡೀತು ಹುಷಾರ್ ಎಂದು ಎಚ್ಚರಿಸಿದರು.
ಹಿಂದೆ ಕಾಂಗ್ರೆಸ್ ನಿಂದಲೇ ಬಿಜೆಪಿಗೆ 17 ಜನ ಬಂದಿದ್ದರು. ಕಾಂಗ್ರೆಸ್ ಹೈಕಮಾಂಡ್ ಇಂದು ಸಿಎಲ್ಪಿ ಸಭೆಗೆ ಬಂದಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲಾ ಸಭೆಗೆ ಆಗಮಿಸಿ ತೇಪೆ ಹಚ್ಚಲು ಬಂದಿದ್ದಾರೆ. ಅವರು ಬಂದು ಹೋದರೂ ಏನೂ ಬದಲಾವಣೆಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಎಲ್ಲಿಯವರೆಗೆ ಪವರ್ ಶೇರಿಂಗ್ ಬಗ್ಗೆ ಶಾಸಕರಿಗೆ ಸ್ಪಷ್ಟ ಅಗುವುದಿಲ್ಲವೋ ಅಲ್ಲಿಯವರೆಗೆ ಕುರ್ಚಿ ಕಾದಾಟ ನಿಲ್ಲಲ್ಲ. ಅಧಿಕಾರ ಹಂಚಿಕೆ ಬಗ್ಗೆ ಹೇಳಬೇಕಾಗಿರುವುದು ಡಿ.ಕೆ. ಶಿವಕುಮಾರ್. ಎಲ್ಲವೂ ಗೂಡಾರ್ಥದ ರೀತಿ ಇದೆ. ಸುರ್ಜೇವಾಲಾ ಅಲ್ಲ ಯಾರು ಬಂದರೂ ಪರಿಸ್ಥಿತಿ ಇಷ್ಟೇ. ಮತ್ತೆ ಎರಡು ದಿನಕ್ಕೆ ಅದೇ ಪರಿಸ್ಥಿತಿಯಾಗುತ್ತದೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


