ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಹಾಗೂ ಅತಿ ಹಳೆಯ ಆಚರಣೆಯಾದ ಕರಗ ಮಹೋತ್ಸವದ ಶಕ್ತ್ಯೋತ್ಸವ ತಡರಾತ್ರಿ 2.30ಕ್ಕೆ ಆರಂಭಗೊಂಡಿದೆ.
ತಿಗಳರಪೇಟೆಯ ಧರ್ಮರಾಯಸ್ವಾಮಿ ದೇಗುಲದ ಬಳಿ ಪಂಚ ಪಾಂಡವರ ದೇವಾಲಯದ ರಥೋತ್ಸವ ನಡೆದ ಬಳಿಕ ದೇವಾಲಯದಲ್ಲಿ ಪೂಜೆ ಮುಗಿಸಿದ ಬಳಿಕ ಕರಗ ಹೊತ್ತ ಜ್ಞಾನೇಂದ್ರ ದೇವಾಲಯದಿಂದ ಆಚೆ ಬಂದು ರಥವನ್ನು ಸುತ್ರು ಹಾಕಿ ನಗರ ಪ್ರದಕ್ಷಿಣೆಗೆ ಹೊರಟಿದ್ದಾರೆ. ಕರಗದ ಸುತ್ತ ವೀರಪುತ್ರರು ರಕ್ಷಣೆಗಾಗಿ ನಿಂತಿದ್ದು, ಮಲ್ಲಿಗೆ ಹೂಮಳೆ ಸುರಿಸಿದ್ದಾರೆ.
ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಮಲ್ಲಿಗೆ ಹೂಗಳಿಂದ ಕರಗವನ್ನು ಅಲಂಕರಿಸಲಾಗಿದ್ದು, ನೆರೆದಿದ್ದ ಭಕ್ತರು ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಕರಗ ಹೊತ್ತು ವೀರನೃತ್ಯ ಮಾಡುತ್ತಾ ನಗರ ಪ್ರದಕ್ಷಿಣೆ ಹೊರಟ ಜ್ಞಾನೇಂದ್ರ 15ನೇ ಬಾರಿಗೆ ಕರಗ ಹೊತ್ತಿದ್ದಾರೆ.
ನಿನ್ನೆ ರಾತ್ರಿ ಹತ್ತು ಗಂಟೆಗೆ ತಿಗಳರಪಾಳ್ಯದಲ್ಲಿ ಮಳೆ ಆರಂಭಗೊಂಡ ಕಾರಣ ರಥ ಸಿದ್ಧತೆ ಕಾರ್ಯ ಹಾಗೂ ಇತರೆ ಪೂಜೆ ಕಾರ್ಯಗಳಲ್ಲಿ ವಿಳಂಬವಾಗಿದ್ದು, ಒಂದೂವರೆಗೆ ಆರಂಭವಾಗಬೇಕಿದ್ದ ಕರಗ ಒಂದು ಗಂಟೆ ತಡವಾಗಿ ಆರಂಭವಾಗಿದೆ. ಮಳೆಯನ್ನೂ ಸಹ ಲೆಕ್ಕಿಸದ ಭಕ್ತ ಸಾಗರ ಕರಗ ಮಹೋತ್ಸವ ಕಣ್ತುಂಬಿಕೊಳ್ಳಲು ಕಾದು ನಿಂತು ಮೆರವಣಿಗೆ ಆರಂಭವಾದ ಬಳಿಕ ತೆರಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


