ನೆಲಮಂಗಲ;ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ನೆಲಮಂಗಲದ ಅಡಕಮಾರನಹಳ್ಳಿ ಬಳಿಯ ಶೆಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ.ಈ ಭೀಕರ ಬೆಂಕಿ ಅವಘಡದಲ್ಲಿ ಸುಮಾರು 40 ಸಾವಿರ ಚದರ ಅಡಿ ವಿಸ್ತೀರ್ಣದ ಗೋದಾಮು ಸಂಪೂರ್ಣವಾಗಿ ಭಸ್ಮವಾಗಿದೆ.ಅಗ್ನಿಶಾಮಕ ಸಿಬ್ಬಂದಿ ಕೂಡಲೇ ದೌಡಾಯಿಸಿದ್ದು, ನೆಲಮಂಗಲ, ಪೀಣ್ಯಾ, ಯಶವಂತಪುರ ಸೇರಿದಂತೆ ವಿವಿಧ ಭಾಗಗಳಿಂದ 8 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಕಾರ್ಯನಿರತವಾಗಿವೆ. ಬೆಂಕಿಯ ತೀವ್ರತೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ಅಕ್ಕಪಕ್ಕದ ಗೋದಾಮುಗಳು ಮತ್ತು ನಿವಾಸಗಳಿಗೆ ಬೆಂಕಿ ತಗುಲುವ ಆತಂಕ ಎದುರಾಗಿದೆ.

30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ ಆಗಿರಬಹುದು ಎನ್ನಲಾಗಿದೆ. ಭಾರತ–ಪಾಕಿಸ್ತಾನ ನಡುವಿನ ಯುದ್ಧದ ಭೀತಿ ಹಿನ್ನೆಲೆಯಲ್ಲೇ ಹೆಚ್ಚುವರಿ ಸ್ಟಾಕ್ ಶೇಖರಣೆ ಮಾಡಲಾಗಿತ್ತು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಆಯಿಲ್ ಕೊರತೆ ಉಂಟಾಗದಂತೆ ಈ ಶೇಖರಣೆ ಮಾಡಲಾಗಿತ್ತು. ಆದರೆ ಈ ಬೆಂಕಿ ಅವಘಡದಿಂದಾಗಿ ಕಂಪನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.ಈ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ತನಿಖೆ ಮುಂದುವರಿದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


