ಅಮೆರಿಕದ ಮಾಂಟಾನಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಮೇಲೆ ವಿಮಾನವೊಂದು ಪತನಗೊಂಡಿರುವ ಘಟನೆ ನಡೆದಿದೆ. ವಿಮಾನ ಡಿಕ್ಕಿ ಪರಿಣಾಮ ಬೆಂಕಿ, ದಟ್ಟ ಹೊಗೆ ಕಾಣಿಸಿಕೊಂಡಿದೆ. ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಮೇಲೆಯೇ ನಾಲ್ವರು ಪ್ರಯಾಣಿಕರನ್ನು ಹೊತ್ತಿದ್ದ ಸಣ್ಣ ವಿಮಾನವೊಂದು ಲ್ಯಾಂಡಿಗ್ ಮಾಡುವಾಗ ಪತನವಾದ (Flight Crash) ಘಟನೆ ನಡೆದಿದೆ. ಸೊಕಾಟಾ ಟಿಬಿಎಂ 700 ಟರ್ಬೊಪ್ರೊಪ್ ವಿಮಾನವು ನೆಲದ ಮೇಲಿದ್ದ ಖಾಲಿ ವಿಮಾನಕ್ಕೆ ಅಪ್ಪಳಿಸಿದೆ ಎಂದು ಎಫ್‌ಎಎ ತಿಳಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.
ವಿಮಾನ ನಿಂತ ನಂತರ ಪ್ರಯಾಣಿಕರು ದುರಂತಕ್ಕೂ ಮೊದಲೇ ತಾವಾಗಿಯೇ ಹೊರಬಂದು ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಮಾತ್ರ ಅಲ್ಪ ಪ್ರಮಾಣದ ಗಾಯಗಳಾಗಿವೆ. ಅವರಿಗೆ ಮೊಂಟಾನಾ ವಿಮಾನ ನಿಲ್ದಾಣದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಅಪಘಾತದ ಪರಿಣಾಮವಾಗಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅದು ಹತ್ತಿರದಲ್ಲಿದ್ದ ಹುಲ್ಲಿಗೆ ಹರಡಿದ್ದು, ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಕಾಲಿಸ್ಪೆಲ್ ವಾಯುವ್ಯ ಮೊಂಟಾನಾದಲ್ಲಿರುವ ಒಂದು ಸಣ್ಣ ನಗರವಾಗಿದ್ದು, ಸುಮಾರು 30,000 ನಿವಾಸಿಗಳಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ, ಪೈಲಟ್ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ವಿಮಾನ ರನ್‌ವೇಗೆ ಅಪ್ಪಳಿಸಿದೆ. ನಂತರ ನಿಂತಿದ್ದ ವಿಮಾನಗಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾಲಿಸ್ಪೆಲ್ ಪೊಲೀಸರು ತಿಳಿಸಿದ್ದಾರೆ. ಆದರೆ ಪೈಲಟ್ ನಿಯಂತ್ರಣ ಕಳೆದುಕೊಂಡಿರಲು ಕಾರಣವೇನೆಂದು ಮಾಹಿತಿ ಇನ್ನೂ ಲಭ್ಯವಿಲ್ಲ. ಅಪಘಾತಕ್ಕೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


