ಬೆಂಗಳೂರು: ಪ್ರಸಕ್ತ 2025-26ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ 2ರಂತೆ 62 ಮೆಟ್ರಿಕ್ ನಂತರದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ.ಎಸ್ ತಂಗಡಗಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ತಲಾ ಒಂದು ಬಾಲಕ-ಬಾಲಕಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗುವುದು. 20-25 ಹಾಸ್ಟೆಲ್‍ಗಳ ಅವಶ್ಯಕತೆ ಇದೆ. ಹಾಸ್ಟೆಲ್‍ಗಳ ಬೇಡಿಕೆ ರಾಜ್ಯದಲ್ಲಿ ಹೆಚ್ಚಾಗಿದೆ ಎಂದರು.
ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ದೊರಕದ ಅರ್ಹ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಯೋಜನೆಯಡಿ ಮಾಸಿಕ 1500 ರೂ.ನಂತೆ ವಾರ್ಷಿಕ 10 ತಿಂಗಳ ಅವಧಿಗೆ 15 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ 32,584 ವಿದ್ಯಾರ್ಥಿಗಳಿಗೆ 49.47 ಕೋಟಿ ರೂ. ನೀಡಲಾಗಿದೆ. ಈ ವರ್ಷ 105 ಕೋಟಿ ಮೀಸಲಿಡಲಾಗಿದ್ದು, 70 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಒದಗಿಸುವ ಗುರಿ ಇದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2597 ವಿದ್ಯಾರ್ಥಿನಿಲಯಗಳಿದ್ದು, 67,358 ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು, 1,77083 ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಕಳೆದ ಸಾಲಿನಲ್ಲಿ 150 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡಿದ್ದು, 15 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಜೆಪಿ ಶಾಸಕ ಸಿದ್ದು ಸವದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೆರದಾಳ ಕ್ಷೇತ್ರದ ರಬಕವಿ ನಗರದ ಸಾಂಸ್ಕೃತಿಕ ಭವನ ನಿರ್ಮಾಣದ ಬಾಕಿ ಅನುದಾನ 18 ಲಕ್ಷ ರೂ.ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ನಿಮ ಸರ್ಕಾರದಲ್ಲಿ ಹಣ ಬಿಡುಗಡೆಯಾಗಿರಲಿಲ್ಲ. 5 ವರ್ಷ ಏನು ಮಾಡಿದ್ದೀರಿ ಎಂದು ಶಾಸಕರನ್ನು ಸಚಿವರು ಪ್ರಶ್ನಿಸಿದರು.
ಸರ್ಕಾರಿ ಜಮೀನು ಕಬಳಿಸುವ ಭೂಗಳ್ಳರ ವಿರುದ್ಧ ಕಠಿಣ ಕ್ರಮದ ಕಾಯ್ದೆ ಇದೇ ತಿಂಗಳು ಜಾರಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


