ಬೆಂಗಳೂರು: ಬಿಜೆಪಿಯವರ ಮಾದರಿಯಲ್ಲಿ ಜನರ ಮೇಲೆ ಧರ್ಮ ಹಾಗೂ ಆಚರಣಾ ಪದ್ಧತಿಗಳನ್ನು ಕಾಂಗ್ರೆಸ್ ಸರ್ಕಾರ ಬಲವಂತವಾಗಿ ಹೇರುವುದಿಲ್ಲ. ಇಲ್ಲಿ ಎಲ್ಲರೂ ಸರ್ವಸ್ವತಂತ್ರವಾಗಿರಲು ಅವಕಾಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ 60 ಪ್ರಶ್ನೆಗಳ ಪೈಕಿ ನಾಸ್ತಿಕ ಹಾಗೂ ಆಸ್ತಿಕ ಎಂಬ ಕಾಲಂ ಇರುವುದನ್ನು ಸಮರ್ಥಿಸಿಕೊಂಡರು.
ಈ ಕಾಲಂ ಇರುವುದು ತಪ್ಪಲ್ಲ, ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಡಳಿತದಲ್ಲಿ ಸರ್ವರೂ ಸ್ವತಂತ್ರರು ಎಂದರು.
ಈ ಹಿಂದೆ ಸಮೀಕ್ಷೆ ನಡೆದಾಗ ಬಹಳಷ್ಟು ಮಂದಿ ತಮ ಜಾತಿಯ ಹೆಸರನ್ನು ಬರೆಸಲು ನಿರಾಕರಿಸಿದರು. ರಾಜ್ಯದಲ್ಲಿ ಬಹಳಷ್ಟು ಮಂದಿ ದೇವರನ್ನು ನಂಬದ ನಾಸ್ತಿಕರಿದ್ದಾರೆ. ದೇವರನ್ನು ನಂಬುವ ಅಸ್ತಿಕರೂ ಇದ್ದಾರೆ. ನಾವೆಲ್ಲಾ ದೇವರನ್ನು ನಂಬುತ್ತೇವೆ. ನಂಬದೇ ಇದ್ದವರ ಮೇಲೆ ನಾವು ಪ್ರಹಾರ ಮಾಡುವುದು ಸರಿಯಲ್ಲ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಈ ರೀತಿ ಪ್ರಹಾರಗಳು ನಡೆದಿತ್ತು. ಯಾವ ಆಹಾರ ತಿನ್ನಬೇಕೆಂಬುದನ್ನು ಅವರೇ ನಿರ್ಧರಿಸುವ ಪರಿಸ್ಥಿತಿ ಇತ್ತು. ಧರ್ಮದ ಕಾಲಂನಲ್ಲಿ ನಾಸ್ತಿಕ ಅಥವಾ ಅಸ್ತಿಕ ಎಂದು ಬರೆಸುವುದು ಜನರ ಆಯ್ಕೆ. ದೇವರನ್ನು ನಂಬದೇ ಇದ್ದವರು ತಮ ಅಭಿಪ್ರಾಯವನ್ನು ದಾಖಲಿಸಲು ಅವಕಾಶ ಬೇಕು ಎಂದು ಕೇಳುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸಾಧ್ಯತೆಗಳನ್ನು ಕಲ್ಪಿಸಿದೆ ಎಂದರು.
ಧರ್ಮ, ಜಾತಿ ವಿಚಾರದಲ್ಲಿ ಇದೇ ರೀತಿ ಬದುಕಬೇಕು ಎಂದು ಸರ್ಕಾರ ಒತ್ತಡ ಹಾಕುವುದಿಲ್ಲ. ಜನ ತಮಗೆ ಸರಿ ಅನಿಸಿದ್ದನ್ನು ಬರೆಸಬಹುದು ಎಂದರು.
ಈ ಹಿಂದೆ ಸಮೀಕ್ಷೆ ನಡೆದಾಗ ಮತಾಂತರವಾಗಿರುವವರು ತಮ್ಮ ಹೊಸ ಧರ್ಮದ ಜೊತೆಗೆ ಜಾತಿಯ ಹೆಸರನ್ನು ಬರೆಸಿದ್ದರು. ಮೊದಲಿನ ಸಮೀಕ್ಷೆಯ ಲೋಪಗಳನ್ನು ಗುರುತಿಸಿ, ಈಗ ಸರಿಪಡಿಸಲಾಗಿದೆ. ಮತಾಂತರವಾಗಿದ್ದರೆ ಪ್ರಸ್ತುತ ಸಮೀಕ್ಷೆಯಲ್ಲಿ ಆಚರಣೆ ಮಾಡುತ್ತಿರುವ ಮಾಹಿತಿಯನ್ನು ಮಾತ್ರ ಭರ್ತಿ ಮಾಡಬಹುದಾಗಿದೆ ಎಂದರು.
2015ರಲ್ಲಿ ಸಮೀಕ್ಷೆ ನಡೆದಾಗ ಬಹಳಷ್ಟು ಜನ ತಾವು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು. ಅದು ಅವರ ಇಚ್ಛೆ. ಈ ಬಾರಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕೆಂದು ಸರ್ಕಾರ ಮನವಿ ಮಾಡುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ಶಿಕ್ಷಕರಿಗೂ ಬ್ಲಾಕ್ ಗುರುತಿಸಿ 150 ಮನೆಗಳವರೆಗೂ ನಿಗದಿ ಪಡಿಸಲಾಗಿದೆ. ಸಮೀಕ್ಷೆ ಮಾಡದೇ ಬಿಟ್ಟು ಹೋದರೆ, ಅದನ್ನು ವೈಜ್ಞಾನಿಕ ಪದ್ಧತಿಯಲ್ಲಿ ಗುರುತಿಸಲಾಗುವುದು. ಶಿಕ್ಷಕರು ಈ ಬಾರಿ ಯಾವುದೇ ಲೋಪ ಮಾಡದೆ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಮಾಡದೇ ಲೋಪವೆಸಗಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು. ತುಳಿತಕ್ಕೊಳಗಾದ ಹಾಗೂ ಕೆಳ ಮಟ್ಟದವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಈ ಸಮೀಕ್ಷೆ ಅನುಕೂಲವಾಗಲಿದೆ ಎಂದರು.
ವೀರಶೈವ ಲಿಂಗಾಯಿತ ಸಮುದಾಯದವರು ಸಮೀಕ್ಷಾದಾರರು ಮನೆ ಬಳಿ ಬಂದಾಗ ತಮಗೆ ತೋಚಿದ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಹೇಳಿದರು.
ಹಾಸನ ಗಣೇಶೋತ್ಸವ ದುರಂತ; ಅಯ್ಯೋ ದುರ್ವಿಧಿಯೇ.. ಸಾವನ್ನಪ್ಪಿದ ಎಲ್ಲರೂ ಮನೆಗೆ ಆಧಾರಸ್ತಂಭವಾಗಬೇಕಿದ್ದ ಯುವಕರೇ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


