ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸೇರ್ಪಡೆಗೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ಅವರು ಪಕ್ಷ ಸೇರಿದ್ದು, ನಾವು ಕಾಂಗ್ರೆಸ್ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಕೇರಳದ ಕೊಟ್ಟಾಯಂ ಮೂಲದ ಕಣ್ಣನ್ ಗೋಪಿನಾಥನ್ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪ್ರಜಾಪ್ರಭುತ್ವದ ನಿರ್ಭೀತ ಧ್ವನಿ, ಮಾಜಿ ಐಎಎಸ್ ಅಧಿಕಾರಿ ಶ್ರೀ ಕಣ್ಣನ್ ಗೋಪಿನಾಥನ್ ಅವರನ್ನು ನಾವು ಕಾಂಗ್ರೆಸ್ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಕೆ.ಸಿ.ವೇಣುಗೋಪಾಲ್ ಪೋಸ್ಟ್ ಹಾಕಿದ್ದಾರೆ.
‘ಅವರು ತತ್ವಬದ್ಧ ಆಡಳಿತಗಾರರಾಗಿ, ಸಕ್ರಿಯ ನಾಗರಿಕರಾಗಿ ಮತ್ತು ಬದ್ಧ ಪ್ರಜಾಪ್ರಭುತ್ವವಾದಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅವರ ಸೇರ್ಪಡೆಯು ಭಾರತದ ಸಂವಿಧಾನ, ಸ್ವಾತಂತ್ರ್ಯ ಮತ್ತು ಎಲ್ಲರನ್ನೂ ಒಳಗೊಂಡ ಸಾಮಾಜಿಕ ರಚನೆಯನ್ನು ರಕ್ಷಿಸುವ ನಮ್ಮ ಆಂದೋಲನಕ್ಕೆ ಖಂಡಿತವಾಗಿಯೂ ಉತ್ತೇಜನ ನೀಡುತ್ತದೆ’ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಕಣ್ಣನ್ ಗೋಪಿನಾಥನ್ ಪರಿಚಯ: 2012ನೇ ಬ್ಯಾಚ್ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗ ಅದನ್ನು ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ 6 ವರ್ಷಗಳ ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿರುವ ಅವರು ಐಝ್ವಾಲ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಣ್ಣನ್ ಗೋಪಿನಾಥನ್, “ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ತಿಳಿದಿದ್ದರೂ ಸ್ವಂತ ಲಾಭ, ದುರಾಸೆ ಅಥವ ಉಳಿವಿಗಾಗಿ ಮೌನವಾಗಿರುವವರು ನಿಜವಾದ ದೇಶದ್ರೋಹಿಗಳು” ಎಂದು ಹೇಳಿದ್ದಾರೆ.
“ನಾನು 2019ರಲ್ಲಿ ರಾಜೀನಾಮೆ ನೀಡಿದ್ದೇನೆ. ಆ ಸಮಯದಲ್ಲಿ ಒಂದು ವಿಷಯ ಸ್ಪಷ್ಟವಾಗಿತ್ತು. ಸರ್ಕಾರ ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುತ್ತಿದೆ ಎಂಬುದು ಸರಿಯಲ್ಲ. ನಾನು ತಪ್ಪಿನ ವಿರುದ್ಧ ಹೋರಾಡಬೇಕಾಗಿತ್ತು ಎಂಬುದು ಸ್ಪಷ್ಟವಾಗಿತ್ತು. ಕಾಂಗ್ರೆಸ್ ಸೇರುವ ಮೊದಲು ನಾನು 80-90 ಜಿಲ್ಲೆಗಳಲ್ಲಿ ಪ್ರಯಾಣಿಸಿ ಜನರೊಂದಿಗೆ ಮಾತನಾಡಿದೆ. ಹಲವಾರು ನಾಯಕರನ್ನು ಭೇಟಿಯಾದೆ. ಪಕ್ಷ ಮಾತ್ರ ದೇಶವನ್ನು ಅದು ಹೋಗಬೇಕಾದ ದಿಕ್ಕಿನಲ್ಲಿ ಕೊಂಡೊಯ್ಯಬಹುದು ಎಂಬುದು ಸ್ಪಷ್ಟವಾಯಿತು” ಎಂದರು.
“370ನೇ ವಿಧಿ ರದ್ದು ಸರ್ಕಾರದ ತೀರ್ಮಾನವೇ ಆಗಿರಬಹುದು. ಆದರೆ ಇಡೀ ರಾಜ್ಯವನ್ನು ಸ್ತಬ್ಥಗೊಳಿಸುವುದು. ಹೋರಾಟಗಾರರು, ಪತ್ರಕರ್ತರನ್ನು ಬಂಧನದಲ್ಲಿಡುವುದು, ಶಾಸಕರು, ಸಂಸದರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇಡುವುದು, ಸಾರಿಗೆ ಸಂಪರ್ಕ ಬಂದ್ ಮಾಡುವುದು ಸರಿಯೇ?. ಇದು ಕೇವಲ ನನ್ನೊಬ್ಬನ ಪ್ರಶ್ನೆ ಅಲ್ಲ, ಇದು ಪ್ರಜಾಪ್ರಭುತ್ವ ದೇಶದ ಆಡಳಿತವೇ?, ಇದನ್ನು ಪ್ರಶ್ನಿಸಿ ನಾನು ರಾಜೀನಾಮೆ ನೀಡಿದ್ದೆ, ನನ್ನ ನಿಲುವಿಗೆ ಇಂದಿಗೂ ನಾನು ಬದ್ಧನಾಗಿದ್ದೇನೆ” ಎಂದು ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


