ವೃತ್ತಿ ರಂಗಭೂಮಿಯ ಹಾಸ್ಯ ಚತುರ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ನಟ ರಾಜು ತಾಳಿಕೋಟೆ ವಿಧಿವಶರಾದರು. ಕೆಲವು ದಿನಗಳ ಹಿಂದೆ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.
ಸೋಮವಾರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ (60) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಶೈನ್ ಶೆಟ್ಟಿ ಅಭಿನಯನದ ಚಿತ್ರದ ಶೂಟಿಂಗ್‌ಗಾಗಿ ಅವರು ಭಾನುವಾರ ಉಡುಪಿಗೆ ಆಗಮಿಸಿದ್ದರು. ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು.
ರಾಜು ತಾಳಿಕೋಟೆ ಅವರು ಭಾನುವಾರ ಚಿತ್ರೀಕರಣದಲ್ಲಿ ತೊಡಗಿದ್ದರು. ಬಳಿಕ ರಾತ್ರಿ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಾಜು ತಾಳಿಕೋಟೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಸ್ಟಂಟ್ ಹಾಕಲಾಗಿತ್ತು.
ಅಂತ್ಯಕ್ರಿಯೆ ಮಂಗಳವಾರ (ಅಕ್ಟೋಬರ್ 14) ಮಧ್ಯಾಹ್ನ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿಯಲ್ಲಿ ನಡೆಯಲಿದೆ ಎಂದು ಪುತ್ರ ಭರತ ತಾಳಿಕೋಟೆ ಮಾಹಿತಿ ನೀಡಿದ್ದಾರೆ.
ರಾಜು ತಾಳಿಕೋಟೆ ರಂಗಭೂಮಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರ ‘ಕಲಿಯುಗದ ಕುಡಕ’ ನಾಟಕ ಬಹಳ ಜನಪ್ರಿಯ. ಕನ್ನಡದ ಹಲವಾರು ಚಿತ್ರಗಳಲ್ಲಿ ಸಹ ರಾಜು ತಾಳಿಕೋಟಿ ನಟಿಸಿದ್ದಾರೆ.
ರಾಜು ತಾಳಿಕೋಟೆ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ, ಪಂಚರಂಗಿ ಚಿತ್ರಗಳಲ್ಲಿ ನಟಿಸಿ ಹಾಸ್ಯದ ಮೂಲಕ ಜನಪ್ರಿಯರಾಗಿದ್ದರು. ಲೈಫು ಇಷ್ಟೇನೇ, ರಾಜಧಾನಿ, ಅಲೆಮಾರಿ, ಟೋಪಿವಾಲಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಸೀಸನ್-7ರಲ್ಲಿ ಸ್ಪರ್ಧಿಯಾಗಿದ್ದರು.
ರಾಜು ತಾಳಿಕೋಟೆ ವಿಜಯಪುರ ಜಿಲ್ಲೆಯ ಸಿಂದಗಿಯವರು. ಉತ್ತರ ಕರ್ನಾಟಕ ಭಾಗದ ಹಾಸ್ಯ ನಾಟಕಗಳ ಮೂಲಕ ಅವರು ರಾಜ್ಯಾದ್ಯಂತ ಪ್ರಸಿದ್ಧಿಯಾಗಿದ್ದರು. ಸಿನಿಮಾಗಳಲ್ಲಿ ತಮ್ಮ ಉತ್ತರ ಕರ್ನಾಟಕ ಭಾಗದ ಮಾತಿನ ಶೈಲಿಯಲ್ಲಿಯೇ ಡೈಲಾಗ್ ಹೇಳುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಡಿಕೆಶಿ ಸಂತಾಪ: ನಟ ರಾಜು ತಾಳಿಕೋಟೆ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಖ್ಯಾತ ರಂಗಭೂಮಿ ನಟ, ಹಾಸ್ಯ ಕಲಾವಿದ, ಧಾರವಾಡ ರಂಗಾಯಣದ ನಿರ್ದೇಶಕರಾಗಿರುವ ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಅತ್ಯಂತ ದುಃಖಕರ ವಿಷಯವಾಗಿದೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ರಾಜು ತಾಳಿಕೋಟಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಷ್ಟವಾಗಿದೆ. ದೇವರು ರಾಜು ತಾಳಿಕೋಟಿ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


