ಕರ್ನಾಟಕ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್ 18ರ ತನಕ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಬೆಂಗಳೂರು ತಡವಾಗಿ ಸಮೀಕ್ಷೆ ಆರಂಭಿಸಲಾಗಿದ್ದು, ಅಂದುಕೊಂಡ ಹಾಗೆ ಗುರಿ ತಲುಪಿಲ್ಲ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿತ್ತು. ಆದರೆ ಸಮೀಕ್ಷೆ ಮಾಡದೇ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರಣ ಕೇಳಿ ನೋಟಿಸ್: ಬೆಂಗಳೂರು ನಗರದಲ್ಲಿ ಸಮೀಕ್ಷೆ ಬಗ್ಗೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಕೆ (ವಲಯ-2) ನೋಡಲ್ ಅಧಿಕಾರಿ ಶಿವಾಜನಗರ ವಿಧಾನಭಾಕ್ಷೇತ್ರ ಈ ನೋಟಿಸ್ ನೀಡಿದ್ದಾರೆ. ಈ ನೋಟಿಸ್ karunadasuddi ಗೆ exclusive ಆಗಿ ಸಿಕ್ಕಿದ್ದು, ವಿವರ ಇಲ್ಲಿದೆ.
ಈ ನೋಟಿಸ್ ಮಾನ್ಯ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮಗ್ರ ಸಮೀಕ್ಷೆ-2025ರ ಸರ್ವೆ ಕಾರ್ಯದಲ್ಲಿ ಕರ್ತವ್ಯ ನಿರ್ಲಕ್ಷತೆ ತೋರಿರುವ ಬಗ್ಗೆ ಎಂಬ ವಿಷಯ ಒಳಗೊಂಡಿದ್ದು, ಸರ್ಕಾರದ ಆದೇಶ ದಿನಾಂಕ 13-08-2025 ಉಲ್ಲೇಖ ಮಾಡಲಾಗಿದೆ.
ನೋಟಿಸ್‌ನಲ್ಲಿ ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮೇಲ್ವಿಚಾರಕರಾದ ತಾವು ಸಾಮಾಜಿಕ ಮತ್ತು ಶೈಕ್ಷಣಿಕ ಸಮಗ್ರ ಸಮೀಕ್ಷೆ-2025ರ ಸಂಬಂಧ ವಾರ್ಡ್ ಸಂಖ್ಯೆ: 63, ಜಯಮಹಲ್ ವಾರ್ಡ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣತಿದಾರರು ದಿನಾಂಕ 11-10-2025ರಂದು ಸಮೀಕ್ಷೆ ಮಾಡಿರುವ ವಿವರಗಳನ್ನು Dashboard ನಲ್ಲಿ ಪರಿಶೀಲಿಸಲಾಗಿ ಕುಟುಂಬದ ಸಮೀಕ್ಷೆಯನ್ನು 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ನಿರ್ವಹಿಸಿರುವುದು ಕಂಡು ಬಂದಿದೆ.
ಈ ಕುರಿತು ತಮ್ಮೊಂದಿಗೆ ಪರಿಶೀಲಿಸಲಾಗಿ ಸದರಿ ಗಣತಿದಾರರು ಒಂದು ಕುಟುಂಬದಲ್ಲಿ ಪ್ರತಿ ಸದಸ್ಯರಿಗೆ UHID ಸೃಜಿಸಲಾಗಿರುವ ಹಾಗೂ ಕೆಲವು ಕುಟುಂಬದಲ್ಲಿ 4 ಸದಸ್ಯರಿದ್ದರೂ ಒಬ್ಬ ಸದಸ್ಯರನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಿರುವುದು ಸ್ಥಳ ತಪಾಸಣೆ ವೇಳೆಯಲ್ಲಿ ಕಂಡು ಬಂದಿದ್ದು, ತಾವು ತಮ್ಮ ಮೇಲ್ವಿಚಾರಣೆ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿರುತ್ತೀರಿ.

ಆದ್ದರಿಂದ, ಈ ರೀತಿಯ ಬೇಜವಾಬ್ದಾರಿತನವನ್ನು ಪರಿಗಣಿಸಿ ಏಕೆ ನಿಮ್ಮ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಬಾರದು? ಎಂಬುದಕ್ಕೆ 24 ಗಂಟೆಯೊಳಗೆ ಸೂಕ್ತ ಸಮಜಾಯಿಷಿಯನ್ನು ಸಲ್ಲಿಸತಕ್ಕದ್ದು ಎಂದು ಕಾರಣ ಕೇಳಲಾಗಿದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ತನಕ ಸಮೀಕ್ಷೆ ನಡೆಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಚರ್ಚಿಸಿದ್ದಾರೆ. ಸಮೀಕ್ಷೆಯನ್ನು ಅಕ್ಟೋಬರ್ 18ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಸಭೆಯಲ್ಲಿಯೇ ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ತಡವಾಗಿ ಸಮೀಕ್ಷೆ ಶುರುವಾಗಿದೆ. ಚುನಾವಣಾ ಆಯೋಗದ ಕೆಲಸ ಮತ್ತು ಇತರೆ ತರಬೇತಿ ಇದ್ದುದ್ದರಿಂದ ತಡವಾಗಿ ಶುರುವಾಗಿದೆ. ಆದ್ದರಿಂದ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿಕೆ ನೀಡಿದ್ದರು.
ಈ ಸಭೆಯಲ್ಲಿಯೇ ಮುಖ್ಯಮಂತ್ರಿಗಳು ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು. ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವವರ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


