ಬಾಗಲಕೋಟೆ: ಕಬ್ಬಿನ ದರಕ್ಕಾಗಿ ರೈತರು ನಡೆಸುತ್ತಿರುವ ಹೋರಾಟ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಮೀರವಾಡಿ ಗೋಧಾವರಿ ಸಕ್ಕರೆ ಕಾರ್ಖಾನೆಯ ಮುಂದೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ರೈತರು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ರೋಶಕ್ಕೆ ಕಾರಣ
ರೈತರು ಪ್ರತಿ ಟನ್ ಕಬ್ಬಿಗೆ ರೂ. 3,500 ದರ ನಿಗದಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.ರಾಜ್ಯ ಸರ್ಕಾರವು ಈಗಾಗಲೇ ಪ್ರತಿ ಟನ್‌ಗೆ ರೂ. 3,200 (ಜೊತೆಗೆ ಕಾರ್ಖಾನೆ ಮತ್ತು ಸರ್ಕಾರದಿಂದ ತಲಾ ರೂ. 50 ಸೇರಿದಂತೆ ರೂ. 3,300) ನೀಡಲು ನಿರ್ಧರಿಸಿದೆ. ಆದರೆ ರೈತರು ಇದಕ್ಕೆ ಒಪ್ಪದೆ ರೂ. 3,500 ಗೆ ಪಟ್ಟು ಹಿಡಿದಿದ್ದಾರೆ.ಕಾರ್ಖಾನೆ ಮಾಲೀಕರು ರೈತರೊಂದಿಗೆ ಮಾತುಕತೆಗೆ ಬಾರದೇ ಇದ್ದುದರಿಂದ ಕೋಪಗೊಂಡ ರೈತರು ಈ ಕೃತ್ಯಕ್ಕೆ ಮುಂದಾಗಿದ್ದಾರೆ.
ಸಮೀರವಾಡೆ ಗೋಧಾವರಿ ಕಾರ್ಖಾನೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳನ್ನು ರಸ್ತೆ ಮಧ್ಯೆ ತಡೆದ ರೈತರು ಮೊದಲು ಒಂದು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ ಉರುಳಿಸಿದ್ದರು.ಬಳಿಕ ಗುಂಪಾಗಿ ಕಾರ್ಖಾನೆಯ ಆವರಣಕ್ಕೆ ತೆರಳಿ ಅಲ್ಲಿ ನಿಲ್ಲಿಸಲಾಗಿದ್ದ 20ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಮತ್ತು ಕೆಲವು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ರೈತರ ಆಕ್ರೋಶದ ಬೆಂಕಿಗೆ ಕಬ್ಬಿನ ಲೋಡ್‌ಗಳು ಧಗ ಧಗನೆ ಹೊತ್ತಿ ಉರಿದಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದಾರೆ. ಅವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.ಈ ಹಿಂಸಾಚಾರದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ರೈತರು ಶಾಂತಿ ಕಾಪಾಡಬೇಕು ಮತ್ತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಎಂದು ಮನವಿ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


