ದೆಹಲಿಯ ಕೆಂಪುಕೋಟೆ ಬಳಿ ಬಿಳಿ ಬಣ್ಣದ ಐ-20 ಕಾರು ಸ್ಫೋಟಗೊಂಡಿತ್ತು. ಸೋಮವಾರ ಸಂಜೆ ನಡೆದ ಈ ಸ್ಫೋಟ ಪ್ರಕರಣದ ತನಿಖೆ ಕೈಗೊಂಡ ಎನ್‌ಐಎ ಬುಧವಾರ ಮಧ್ಯಾಹ್ನದಿಂದ ಮತ್ತೊಂದು ಕಾರಿಗಾಗಿ ಹುಡುಕಾಟ ನಡೆಸಿತ್ತು.
ದೆಹಲಿ ಸ್ಫೋಟ ಪ್ರಕರಣದ ಆರೋಪಿಯೇ ನಕಲಿ ದಾಖಲೆಗಳನ್ನು ನೀಡಿ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಖರೀದಿ ಮಾಡಿದ್ದ ಎಂಬ ಮಾಹಿತಿಯನ್ನು ಎನ್‌ಐಎ ಸಂಗ್ರಹ ಮಾಡಿತ್ತು. ಆದ್ದರಿಂದ ಕಾರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿತ್ತು.
ತನಿಖೆಯಲ್ಲಿ ಹ್ಯುಂಡೈ ಐ-20 ಕಾರಿನ ಜೊತೆಗೆ ಇನ್ನೊಂದು ಕಾರು ಇರುವುದು ಬಯಲಾಗಿದ್ದು, ಆತಂಕ ಮೂಡಿಸಿತ್ತು. ಆದ್ದರಿಂದ ದೆಹಲಿಯ ಎಲ್ಲ ಪೊಲೀಸ್ ಠಾಣೆಗಳು, ಪೊಲೀಸ್ ಚೆಕ್ ಪೋಸ್ಟ್‌ಗಳು ಮತ್ತು ಗಡಿ ಚೆಕ್‌ಪೋಸ್ಟ್‌ಗಳಿಗೆ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಹುಡುಕಿ ಪತ್ತೆ ಮಾಡುವಂತೆ ಸಂದೇಶ ಕಳಿಸಲಾಗಿತ್ತು.
ಈ ಕಾರಿನ ಹುಡುಕಾಟಕ್ಕಾಗಿ ದೆಹಲಿ ಪೊಲೀಸರ 5 ತಂಡಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಕೆಂಪು ಬಣ್ಣದ ಈ ಕಾರು ಕುರಿತು ಉತ್ತರ ಪ್ರದೇಶ ಮತ್ತು ಹರ್ಯಾಣ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಗುರುವಾರ ಬೆಳಗ್ಗೆ ಹರ್ಯಾಣದಲ್ಲಿ ನುಹ್ ಪ್ರದೇಶದಲ್ಲಿ ಈ ಕಾರು ಪತ್ತೆಯಾಗಿದೆ.
ಮತ್ತೊಬ್ಬ ಶಂಕಿತನ ಆಗಮನ?: ಬಿಳಿ ಬಣ್ಣದ ಐ-20 ಕಾರಿನ ಜೊತೆ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರು ಸಹ ದೆಹಲಿಗೆ ಆಗಮಿಸಿತ್ತೇ?. ಇಬ್ಬರು ಸ್ಫೋಟ ಪ್ರಕರಣಕ್ಕಾಗಿಯೇ ದೆಹಲಿ ನಗರಕ್ಕೆ ಬಂದಿದ್ದರೆ? ಎಂದು ತನಿಖೆ ಸಾಗಿದೆ.
ಗುಪ್ತಚರ ಇಲಾಖೆ ಬುಧವಾರ ಐ-20 ಕಾರಿನ ಮಾದರಿಯಲ್ಲಿ ದೆಹಲಿಯಲ್ಲಿ ಹಲವು ಕಡೆ ಸ್ಪೋಟ ನಡೆಸುವ ಸಂಚು ರೂಪಿಸಲಾಗಿತ್ತು. ಅದಕ್ಕಾಗಿ ಕಾರುಗಳನ್ನು ಖರೀದಿ ಮಾಡಲಾಗಿತ್ತು ಎಂಬ ಮಾಹಿತಿಯನ್ನು ನೀಡಿತ್ತು. ಇದನ್ನು ಸಮರ್ಥಿಸಿಕೊಳ್ಳುವಂತೆ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರು ಖರೀದಿ ಮಾಡಲಾಗಿತ್ತು.
ದೆಹಲಿ ರಾಜ್ಯದ ಗಡಿ ಪ್ರದೇಶದಲ್ಲಿ ಈ ಮಾದರಿ ಕಾರುಗಳನ್ನು ಖರೀದಿ ಮಾಡಿ, ಅವುಗಳಲ್ಲಿ ಸ್ಫೋಟಕಗಳನ್ನು ತುಂಬಿಸಿ ಅವುಗಳನ್ನು ಸ್ಪೋಟಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಆದ್ದರಿಂದ ಫೋರ್ಡ್ ಇಕೋಸ್ಪೋರ್ಟ್ ಕಾರು ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಲರ್ಟ್ ಆಗಿ ಅದಕ್ಕಾಗಿ ಹುಡುಕಾಟ ಆರಂಭಿಸಲಾಗಿತ್ತು.
ಐ-20 ಕಾರಿನಲ್ಲಿದ್ದ, ಸ್ಫೋಟದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯೇ ಫೋರ್ಡ್ ಇಕೋಸ್ಪೋರ್ಟ್ ಕಾರು ಖರೀದಿ ಮಾಡಿರುವ ಬಗ್ಗೆ ತನಿಖೆಯಿಂದ ಮಾಹಿತಿ ತಿಳಿದುಬಂದಿದೆ. ಆದರೆ ಈ ಕಾರಿಗೆ ಇನ್ನೂ ಸಹ ಸ್ಪೋಟಕಗಳನ್ನು ಲೋಡ್ ಮಾಡಿರಲಿಲ್ಲ.
ದೆಹಲಿಯ 4 ಸ್ಥಳಗಳಲ್ಲಿ ಸ್ಪೋಟಗಳನ್ನು ಮಾಡಲು 8 ಮಂದಿಯ ಗುಂಪು ರಚನೆ ಮಾಡಲಾಗಿತ್ತು. ಇದರಲ್ಲಿ ಒಬ್ಬ ವ್ಯಕ್ತಿ ಕೆಂಪು ಕೋಟೆ ಬಳಿಕ ಕಾರು ಸ್ಪೋಟದಲ್ಲಿ ಸಾವನ್ನಪ್ಪಿದ್ದು, ಉಳಿದ 7 ಜನರಿಗಾಗಿ ಹುಡುಕಾಟ ತೀವ್ರವಾಗಿದೆ.
ಡಾ. ಉಮರ್ ಈ ಎಲ್ಲಾ ಸ್ಪೋಟದ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಎಂದು ಅಂದಾಜಿಸಲಾಗಿದೆ. ಐಇಡಿ ಸಾಧನಗಳನ್ನು ಬಳಕೆ ಮಾಡಿಕೊಂಡು ಒಂದೇ ಮಾದರಿಯಲ್ಲಿ ದೆಹಲಿಯಲ್ಲಿ ಸ್ಪೋಟಗಳನ್ನು ನಡೆಸುವುದು ಸಂಚಾಗಿತ್ತು. ಫರಿದಾಬಾದ್‌ನಲ್ಲಿ ಸ್ಪೋಟಕಗಳನ್ನು ವಶಕ್ಕೆ ಪಡೆದ ಬಳಿಕ ಯೋಜನೆ ಬಹಿರಂಗವಾಗಿತ್ತು.
ಆದರೆ ಅಷ್ಟರಲ್ಲೇ ಒಂದು ಸ್ಪೋಟದ ಪ್ಲಾನ್ ಅಂತಿಮವಾಗಿದ್ದು, ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟಿಸಲಾಗಿದೆ. ದೆಹಲಿ ಮತ್ತು ಸುತ್ತಮತ್ತಲಿನ ರಾಜ್ಯದ ಗಡಿ ಭಾಗದಲ್ಲಿನ ಅನುಮಾಸ್ಪದ ಚಟುವಟಿಕೆಗಳ ಕುರಿತು ತನಿಖಾ ಸಂಸ್ಥೆಗಳು ತನಿಖೆ ಚುರುಕುಗೊಳಿಸಿವೆ. ಈ ಜಾಲ ಗಡಿಭಾಗದಿಂದಲೇ ಕಾರ್ಯ ನಿರ್ವಹಣೆ ಮಾಡುತ್ತಿತ್ತು ಎಂದು ಅಂದಾಜಿಸಲಾಗಿದೆ.
ತನಿಖಾ ಸಂಸ್ಥೆಗಳು ಹುಂಡೈ ಐ-20 ಕಾರನ್ನು ಪುಲ್ವಾಮಾದ ವೈದ್ಯ ಉಮರ್ ನಬಿ ಎಂಬಾತನೇ ಚಾಲನೆ ಮಾಡುತ್ತಿದ್ದ ಎಂಬುದನ್ನು ಬುಧವಾರ ಪತ್ತೆ ಹಚ್ಚಿವೆ. ಡಾ. ಉಮರ್ ನಬಿಯದ್ದು ಎಂದು ಹೇಳಲಾದ ಕೈ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


