2024 ಮುಕ್ತಾಯದ ಹಂತಕ್ಕೆ ಬಂದಿದ್ದು, ನೂತನ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಿಹಿ ಹಾಗೂ ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನು ಕನ್ನಡ ಚಿತ್ರರಂಗದ ಒಟ್ಟು 7 ಮಂದಿ ಕಲಾವಿದರು ಈ ವರ್ಷ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಈ ವರ್ಷ ನಮ್ಮನ್ನಗಲಿದ ಕನ್ನಡದ ಕಲಾವಿದರ ಪಟ್ಟಿ ಇಲ್ಲಿದೆ:
ಅಪರ್ಣಾ ವಸ್ತಾರೆ
ಅಪ್ಪಟ ಕನ್ನಡತಿ, ನಿರೂಪಕಿ ಹಾಗೂ ನಟಿ ಅಪರ್ಣಾ ಇದೇ ವರ್ಷದ ಜೂನ್ ತಿಂಗಳಿನಲ್ಲಿ ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತಮ್ಮ ಅದ್ಭುತ ನಟನೆ, ಸ್ಪಷ್ಟ ಕನ್ನಡ ಉಚ್ಛಾರಣೆಯಿಂದ ಅಪಾರ ಪ್ರೇಕ್ಷಕರ ಮನ ಗೆದ್ದಿದ್ದರು. ಟಿವಿಯ ಅನೇಕ ಶೋಗಳಲ್ಲಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿರುವ ಅಪರ್ಣಾ ನಮ್ಮ ಮೆಟ್ರೋ ರೈಲಿನ ಮಾರ್ಗ ವಿವರಣೆಗೂ ಸಹ ತಮ್ಮ ದನಿಯನ್ನು ನೀಡಿದ್ದರು.
ದ್ವಾರಕೀಶ್
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟ, ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಇದೇ ವರ್ಷದ ಏಪ್ರಿಲ್ 19ರಂದು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ 81ನೇ ವಯಸ್ಸಿಗೆ ಜೀವನ ಪಯಣ ನಿಲ್ಲಿಸಿದರು.
ಗುರು ಪ್ರಸಾದ್
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಚರ್ಚೆಗೀಡಾಗಿದ್ದು ಗುರು ಪ್ರಸಾದ್ ಸಾವಿನ ವಿಚಾರ. ವಿಭಿನ್ನ ಚಿತ್ರಗಳನ್ನು ನೀಡಿ ಕನ್ನಡ ಸಿನಿ ರಸಿಕರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಗುರು ಪ್ರಸಾದ್ ಕಳೆದ ನವೆಂಬರ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾದರು. ಗುರು ಪ್ರಸಾದ್ ತೀವ್ರ ಸಾಲ ಹಾಗೂ ಖಿನ್ನತೆಗೊಳಗಾಗಿದ್ದೇ ಕಾರಣ ಎನ್ನಲಾಯಿತು.
ಖ್ಯಾತ ಪೋಷಕ ನಟ ಟಿ ತಿಮ್ಮಯ್ಯ
ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ಸೇರಿದಂತೆ ಇನ್ನೂ ಹಲವು ಸ್ಟಾರ್‌ಗಳ ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದ ಹಿರಿಯ ಕಲಾವಿದ ನವೆಂಬರ್ 16ರಂದು ಮರಣ ಹೊಂದಿದರು.
ಕೆ ಶಿವರಾಂ
ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿ ಹಲವರಿಗೆ ಸ್ಪೂರ್ತಿಯಾಗಿದ್ದ ಕೆ ಶಿವರಾಂ ಇದೇ ವರ್ಷದ ಫೆಬ್ರವರಿ 29ರಂದು ನಿಧನ ಹೊಂದಿದರು. ʼಬಾ ನಲ್ಲೆ ಮಧುಚಂದ್ರಕೆʼ ರೀತಿಯ ಆಲ್‌ಟೈಮ್ ಸೂಪರ್‌ಹಿಟ್ ಚಿತ್ರದಲ್ಲಿ ಶಿವರಾಂ ನಾಯಕನಾಗಿ ನಟಿಸಿದ್ದರು.
ಪವಿತ್ರಾ ಜಯರಾಂ
ಮೂಲತಃ ಮಂಡ್ಯ ಜಿಲ್ಲೆಯವರಾದ ಕಿರುತೆರೆ ಕಲಾವಿದೆ ಪವಿತ್ರಾ ಜಯರಾಂ ಹೈದರಾಬಾದ್‌ನಲ್ಲಿ ಮೇ 12ರಂದು ಅಪಘಾತದಿಂದ ನಿಧನ ಹೊಂದಿದರು. ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದ ಪವಿತ್ರಾ ಜಯರಾಂ ಬಳಿಕ ತೆಲುಗಿನ ಧಾರಾವಾಹಿಗಳಲ್ಲಿಯೂ ನಟಿಸಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಹೈದರಾಬಾದ್‌ನ ಕರ್ನಾಟಕದ ಕಡೆ ಬರುವಾಗ ಪವಿತ್ರಾ ಜಯರಾಂ ಇದ್ದ ಕಾರು ಅಪಘಾತಕ್ಕೊಳಗಾಗಿತ್ತು.
ಶೋಭಿತಾ ಶಿವಣ್ಣ
ಕನ್ನಡದ ಬ್ರಹ್ಮಗಂಟು ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ಇದೇ ತಿಂಗಳ 1ರಂದು ನಿಧನ ಹೊಂದಿದರು. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಶೋಭಿತಾ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಷ್ಟವಿಲ್ಲದ ಮದುವೆಯಾಗಿದ್ದೇ ಆತ್ಮಹತ್ಯೆಗೆ ಕಾರಣ ಎಂಬ ವಿಷಯ ನಂತರ ಕೇಳಿಬಂತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


