ಬೆಳಗಾವಿ: ವಕ್ಫ್ ಆಸ್ತಿ ವಿವಾದ ಕುರಿತ ಚರ್ಚೆಗೆ ಸ್ಪೀಕರ್ ಯು.ಟಿ.ಖಾದರ್ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಬಿಜೆಪಿ ಶಾಸಕರು ಇಂದು ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಹನಿಟ್ರಾಪ್ ಹಾಗೂ ಎದುರಾಳಿಗಳಿಗೆ ಎಚ್‌ಐವಿ ಸೋಂಕು ತಗುಲುವ ಇಂಜೆಕ್ಷನ್ ಕುರಿತು ಸದನದಲ್ಲಿ ಚರ್ಚೆ ಮಾಡುವಂತೆ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದರು.
ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ಶಾಸಕರು ಸಭೆಯಿಂದ ನಿರ್ಗಮಿಸಿದರು.
ಸಭಾತ್ಯಾಗದ ನಂತರ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಕಿಡಿಕಾರಿದರು.
ಸ್ಪೀಕರ್ ಒಂದು ಕಡೆಯವರಂತೆ ವರ್ತಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ವಕ್ಫ್ ವಿಚಾರ ಕುರಿತ ಚರ್ಚೆಗೆ ಸೋಮವಾರವೇ ಅವರ ಬಳಿ ಮನವಿ ಮಾಡಿದ್ದೆವು. ಸಾಮಾನ್ಯವಾಗಿ ಪ್ರಶ್ನೋತ್ತರ ಅವಧಿ ನಂತರ ಚರ್ಚೆಗೆ ಸಮಯವನ್ನು ನೀಡಲಾಗುತ್ತದೆ. ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಸ್ಪೀಕರ್ ಖಾದರ್ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸದನದಲ್ಲಿ ಕೋಪ ತೋರಿಸುತ್ತಿದ್ದಾರೆ. ಯೋಜಿತ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರೆಲ್ಲಾ ಸದನದಿಂದ ಹೊರ ನಡೆದರು ಎಂದು ಅಶೋಕ್ ಕಿಡಿಕಾರಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


