ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಮೊನ್ನೆಯಷ್ಟೇ ( ಡಿಸೆಂಬರ್ 11) ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿದೆ. ತಾರಕ್ ಬಳಿಕ ಎರಡನೇ ಬಾರಿಗೆ ದರ್ಶನ್ ಜತೆ ಕೈ ಜೋಡಿಸಿರುವ ನಿರ್ದೇಶಕ ಪ್ರಕಾಶ್ ಈ ಬಾರಿ ಹಿಂದೆಂದೂ ಮುಟ್ಟಿರದ ಪೊಲಿಟಿಕಲ್ ಡ್ರಾಮಾವನ್ನು ತೆರೆ ಮೇಲೆ ತಂದಿದ್ದಾರೆ.
ದ್ವಿಪಾತ್ರದಲ್ಲಿ ದರ್ಶನ್ ನಟಿಸಿರುವುದು ಅಭಿಮಾನಿಗಳ ಪಾಲಿಗೆ ಸಖತ್ ಖುಷಿ ಕೊಟ್ಟಿದ್ದು, ಚಿತ್ರ ನೋಡಿ ಹೊರಬಂದ ಸಾಮಾನ್ಯ ಸಿನಿ ರಸಿಕರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ.
ಇನ್ನು ಮೊದಲ ದಿನ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಡೆವಿಲ್ ಮುಂಜಾನೆ ಹಾಗೂ ಬೆಳಗಿನ ಪ್ರದರ್ಶನಗಳಿಗೆ ಅಬ್ಬರದ ರೆಸ್ಪಾನ್ಸ್ ಪಡೆದುಕೊಂಡಿತ್ತು. ಕೇವಲ ಮುಂಗಡ ಟಿಕೆಟ್ ಖರೀದಿಯಲ್ಲೇ ಬರೋಬ್ಬರಿ 7 ಕೋಟಿ ರೂಪಾಯಿ ಬಾಚಿಕೊಂಡಿದ್ದ ಡೆವಿಲ್ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂಬ ಕುತೂಹಲ ಉಂಟಾಗಿತ್ತು.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಮ್ಯಾಂಗೋ ಮ್ಯೂಸಿಕ್ ಕನ್ನಡ ಹಾಗೂ ಎಕ್ಸ್ ಅಪ್ಲಿಕೇಶನ್‌ನಲ್ಲಿ ಹಲವು ಖಾತೆಗಳು ಡೆವಿಲ್ ಮೊದಲ ದಿನ 30.68 ಕೋಟಿ ರೂ ಗಳಿಕೆ ಮಾಡಿದೆ ಎಂದು ಪೋಸ್ಟರ್ ಹಂಚಿಕೊಂಡಿವೆ. ಆದರೆ ಇದು ನಕಲಿ, ಡೆವಿಲ್ ಮೊದಲ ದಿನ ಇಷ್ಟು ಗಳಿಕೆ ಮಾಡಿಯೇ ಇಲ್ಲ.
ಇತ್ತ ಡೆವಿಲ್ ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಿತು ಎಂಬುದನ್ನು ವಿವಿಧ ಬಾಕ್ಸ್‌ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ಪ್ರಕಟಿಸಿದ್ದು, ಜನಪ್ರಿಯ ಸ್ಯಾಕ್‌ನಿಕ್ ವೆಬ್‌ಸೈಟ್ ಪ್ರಕಾರ ಡೆವಿಲ್ ಮೊದಲ ದಿನ 10 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. 10 ಕೋಟಿ ನೆಟ್ ಕಲೆಕ್ಷನ್ ಎಂದರೆ ಸುಮಾರು ಹತ್ತಿರತ್ತಿರ 15 ಕೋಟಿ ರೂ ಗ್ರಾಸ್ ಕಲೆಕ್ಷನ್ ಆಗಲಿದೆ.
ಇನ್ನು ದರ್ಶನ್ ಅಧಿಕೃತ ಫ್ಯಾನ್‌ಪೇಜ್ ಡಿ ಕಂಪನಿ ಸಹ ಮೊದಲ ದಿನದ ಕಲೆಕ್ಷನ್ ಅನ್ನು ಪ್ರಕಟಿಸಿದ್ದು, ಈ ಪ್ರಕಾರ ಡೆವಿಲ್ ಮೊದಲ ದಿನ 13.8 ಕೋಟಿ ಗಳಿಕೆ ಮಾಡಿದೆ.
ಆದರೆ ಈ ಕುರಿತು ಚಿತ್ರದ ನಿರ್ಮಾಪಕರು ಯಾವುದೇ ಮಾಹಿತಿ ನೀಡದೇ ಇದ್ದು, ಅಧಿಕೃತ ಕಲೆಕ್ಷನ್ ಘೋಷಣೆ ಮಾಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


