ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಶನಿವಾರ ನಡೆಯುತ್ತಿದೆ. ಮುನ್ನಾರ್ ಪಂಚಾಯಿತಿಯ 16ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸೋನಿಯಾ ಗಾಂಧಿ ಚುನಾವಣೆಯಲ್ಲಿ ಎಲ್‌ಡಿಎಫ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.
ಕೌಟುಂಬಿಕವಾಗಿ ಕಾಂಗ್ರೆಸ್ ಪಕ್ಷದ ನಂಟನ್ನು 34 ವರ್ಷದ ಸೋನಿಯಾ ಗಾಂಧಿ ಹೊಂದಿದ್ದರು. ಇಡುಕ್ಕಿ ಜಿಲ್ಲೆಯ ಮುನ್ನಾರ್ ಪಂಚಾಯತಿಯ ನಲ್ಲತ್ತನ್ನಿ (ವಾರ್ಡ್ ನಂಬರ್ 16) ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು.
ಸೋನಿಯಾ ಗಾಂಧಿ ಎಂಬ ಹೆಸರಿನ ಕಾರಣಕ್ಕೆ ಮತ್ತು ಅವರು ಬಿಜೆಪಿ ಅಭ್ಯರ್ಥಿಯಾದ ಕಾರಣಕ್ಕೆ ವಾರ್ಡ್ ನಂಬರ್ 16ರ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. ಶನಿವಾರ ಮತ ಎಣಿಕೆ ನಡೆದಿದ್ದು, ಎಲ್‌ಡಿಎಫ್ ಅಭ್ಯರ್ಥಿ ವಲರಮತಿ ಗೆಲುವು ಸಾಧಿಸಿದ್ದಾರೆ. ಸೋನಿಯಾ ಗಾಂಧಿಗೆ ಸೋಲಾಗಿದೆ.
ಪತಿಯ ಜೊತೆ ಪ್ರಚಾರ: ಕಾಂಗ್ರೆಸ್ ಪಕ್ಷದ ನಾಯಕ ದುರೈರಾಜು ಅವರ ಪುತ್ರಿ ಸೋನಿಯಾ ಗಾಂಧಿ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಭಿಮಾನಿಯಾಗಿದ್ದ ದುರೈರಾಜು ಪುತ್ರಿಗೆ ಸೋನಿಯಾಗ ಗಾಂಧಿ ಎಂದು ನಾಮಕರಣ ಮಾಡಿದ್ದರು.
ಸುಭಾಷ್ ಅವರನ್ನು ಸೋನಿಯಾ ಗಾಂಧಿ ವಿವಾಹವಾಗಿದ್ದರು. ಆದರೆ ಪತಿಯ ಮನೆಯಲ್ಲಿ ಎಲ್ಲರೂ ಬಿಜೆಪಿ ಬೆಂಬಲಿಗರು. ಸುಭಾಷ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಆದ್ದರಿಂದ ಸೋನಿಯಾ ಗಾಂಧಿ ಅಹ ಅನಿವಾರ್ಯವಾಗಿ ಬಿಜೆಪಿ ಸೇರಿದ್ದರು. ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಿಜೆಪಿ ಅಭ್ಯರ್ಥಿಯಾಗಲು ಟಿಕೆಟ್ ನೀಡಲಾಗಿತ್ತು.
ಸೋನಿಯಾ ಗಾಂಧಿ ಎಂಬ ಹೆಸರಿನ ಕಾರಣ, ಬಿಜೆಪಿ ಅಭ್ಯರ್ಥಿಯಾದ ಕಾರಣ ಮುನ್ನಾರ್ ಪಂಚಾಯತಿಯ ನಲ್ಲತ್ತನ್ನಿ (ವಾರ್ಡ್ ನಂಬರ್ 16) ಚುನಾವಣೆ ಭಾರೀ ಸುದ್ದಿಯಾಗಿತ್ತು. ರಾಷ್ಟ್ರೀಯ ಮಾಧ್ಯಮಗಳು ಸಹ ಸೋನಿಯಾ ಗಾಂಧಿ ಚುನಾವಣಾ ಪ್ರಚಾರದ ಕುರಿತು ವರದಿಗಳನ್ನು ಮಾಡಿದ್ದವು.
ಸೋನಿಯಾ ಗಾಂಧಿ ಪತಿ ಸುಭಾಷ್ ಬಿಜೆಪಿಯ ಪಂಚಾಯತ್ ಪ್ರಧಾನ ಕಾರ್ಯದರ್ಶಿ. ಪತ್ನಿಯನ್ನು ಗೆಲ್ಲಿಸಲು ಸುಭಾಷ್ ಸಹ ಸಕ್ರಿಯವಾಗಿ ಪ್ರಚಾರವನ್ನು ನಡೆಸಿದ್ದರು. ಆದರೆ ಎಲ್‌ಡಿಎಫ್ ಅಭ್ಯರ್ಥಿ ವಿರುದ್ಧ ಸೋನಿಯಾ ಗಾಂಧಿ ಸೋಲು ಕಂಡಿದ್ದಾರೆ.
ಡಿಸೆಂಬರ್ 9, 11ರಂದು ಕೇರಳದ 1,199 ಸ್ಥಳೀಯ ಸಂಸ್ಥೆಗಳ 23,573 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಶನಿವಾರ ಮತ ಎಣಿಕೆ ನಡೆಯುತ್ತಿದೆ. ಎಲ್‌ಡಿಎಫ್ ಅತಿ ಹೆಚ್ಚು ವಾರ್ಡ್‌ಗಳಲ್ಲಿ ಗೆಲುವು ಸಾಧಿಸುತ್ತಿದೆ. 2026ರಲ್ಲಿ ಕೇರಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ನಡೆಯುತ್ತಿರುವ ಈ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು.
6 ಮಹಾನಗರ ಪಾಲಿಕೆ, 14 ಜಿಲ್ಲಾ ಪಂಚಾಯಿತಿ, 87 ಪುರಸಭೆ, 152 ಬ್ಲಾಕ್ ಪಂಚಾಯಿತಿ, 941 ಗ್ರಾಮ ಪಂಚಾಯಿತಿಗಳಿಗೆ ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು. 87 ಪುರಸಭೆಗಳ ಪೈಕಿ ಯುಡಿಎಫ್ 54, ಎಲ್‌ಡಿಎಫ್ 28ರಲ್ಲಿ ಮುನ್ನಡೆಯಲ್ಲಿದೆ.
941 ಗ್ರಾಮ ಪಂಚಾಯಿತಿಗಳ ಪೈಕಿ ಎಲ್‌ಡಿಎಫ್ 344ರಲ್ಲಿ ಮುನ್ನಡೆ ಪಡೆದುಕೊಂಡಿದೆ. 14 ಜಿಲ್ಲಾ ಪಂಚಾಯಿತಿಗಳ ಪೈಕಿ ಯುಡಿಎಫ್ 7, ಎಲ್‌ಡಿಎಫ್ 7ರಲ್ಲಿ ಮುನ್ನಡೆಯಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


