ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ತಕ್ಷಣದ ಬಾಂಬ್ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ತಪಾಸಣೆ ನಡೆಸಿತ್ತು. ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿದುಬಂದಿತ್ತು. ಆದರೆ ಈ ಇ-ಮೇಲ್ ಕಳಿಸಿದ್ದು ತಮಿಳುನಾಡು ಮೂಲದ 13 ವರ್ಷದ ಬಾಲಕಿ.
ಬಾಂಬ್ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಎಸ್ಪಿ ನಿಖಿಲ್ ಪರಿಸ್ಥಿತಿಯ ಕುರಿತು ನಿಗಾವಹಿಸಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.
ಇದು ಹುಸಿ ಬೆದರಿಕೆ ಸಂದೇಶ ಎಂದು ತಿಳಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಈ ತನಿಖೆ ತಮಿಳುನಾಡು ರಾಜ್ಯಕ್ಕೆ ಹೋಗಿ ತಲುಪಿದೆ. ಈ ಸಂದೇಶ ಕಳಿಸಿದ್ದು, 13 ವರ್ಷದ ಬಾಲಕಿ. ಆದರೆ ಇದಕ್ಕೆ ಸಹ ಬಹುಮುಖವಾದ ಕಾರಣವಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ತಮಿಳುನಾಡು ರಾಜ್ಯದ ಮೈಲಾಪುರ ಗ್ರಾಮದ 13 ವರ್ಷದ ಬಾಲಕಿ ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿದ್ದಳು. ಬಾಲಕಿ ಕಳಿಸಿದ ಇ-ಮೇಲ್‌ನಲ್ಲಿ ಮೊದಲು ಆರ್‌ಡಿಎಕ್ಸ್ ಎಂದು ಬಳಕೆ ಮಾಡಿದ್ದು, ಬಳಿಕ ತನ್ನ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ವಿವರಿಸಿದ್ದಾಳೆ.
ತನ್ನ ಮೇಲಿನ ದೌರ್ಜನ್ಯದ ಗಮನ ಸೆಳೆಯಲು ಬಾಲಕಿ ಬಾಂಬ್ ಬೆದರಿಕೆ ಸಂದೇಶವನ್ನು ಕಳಿಸಿದ್ದಳು. ಇದು ನಿಜವಾದ ಬಾಂಬ್ ಬೆದರಿಕೆ ಇ-ಮೇಲ್ ಅಲ್ಲ. ಆದರೆ ಶಿಷ್ಟಾಚಾರದ ಪ್ರಕಾರ ಡಿಸಿ ಅಫೀಸ್ ಸಂಪೂರ್ಣ ಪರಿಶೀಲನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಾಂಬ್ ಬೆದರಿಕೆ ಇ-ಮೇಲ್ ಬರುವಾಗ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ನಡೆಸುತ್ತಿದ್ದರು. ಆದರೆ ಸಭೆಯನ್ನು ಸ್ಥಗಿತಗೊಳಿಸಿ ಅವರು ಸಹ ತಪಾಸಣೆ ಕಾರ್ಯಕ್ಕೆ ಸಹಕಾರವನ್ನು ನೀಡಿದ್ದರು.
ಬಾಂಬ್ ಬೆದರಿಕೆ ಇ-ಮೇಲ್‌ನಲ್ಲಿ 5 RDX Improvised Explosive Device (IED) ಸ್ಫೋಟಕಗಳನ್ನು ಬೀದರ್/ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಡಲಾಗಿದೆ. Set to blast soon. ಮಧ್ಯಾಹ್ನ 2 ಗಂಟೆಯೊಳಗೆ ಕಲೆಕ್ಟರ್/ ಸಿಬ್ಬಂದಿಗಳನ್ನು ಕಳುಹಿಸಿ ಎಂದು ಟೈಪ್ ಮಾಡಲಾಗಿತ್ತು.
ಇ-ಮೇಲ್‌ನ ಸಬ್ ಜೆಕ್ಟ್ ಕಾಲಂನಲ್ಲಿ ಮಾತ್ರ 5 ಆರ್‌ಡಿಎಸ್ ಸ್ಪೋಟಗಳು ಎಂದು ಉಲ್ಲೇಖಿಸಲಾಗಿತ್ತು. ಹೊರರಾಜ್ಯದಿಂದ ಈ ಇ-ಮೇಲ್ ಬಂದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿಯೇ ಪೊಲೀಸರು ಹೇಳಿದ್ದರು.
ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ. ಆದರೆ ಬೇರೆ ಬೇರೆ ಆಯಾಮದಲ್ಲಿಯೂ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಕೋಲಾರ ಎಸ್ಪಿ ನಿಖಿಲ್ ಬಿ. ಮಾಧ್ಯಮಗಳಿಗೆ ತಿಳಿಸಿದ್ದರು.
13 ವರ್ಷದ ಬಾಲಕಿ ತನ್ನ ಸಂಬಂಧಿಯಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದಾಳೆ. ಈ ಕುರಿತು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾಳೆ. ಸಂಬಂಧಿ ಮಾಜಿ ಶಾಸಕರೊಬ್ಬರ ಆಪ್ತರಾಗಿದ್ದು, ಇಬ್ಬರು ಕಿರುಕುಳ ಕೊಟ್ಟಿದ್ದಾರೆ ಎಂದು ವಿವರಣೆ ನೀಡಿದ್ದಾಳೆ.
ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಹುಸಿ ಬಾಂಬ್ ಬೆದರಿಕೆ ಸಂದೇಶದ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಅಪ್ತ ಸಹಾಯಕರ ಮೂಲಕ ಬಾಂಬ್ ಬೆದರಿಕೆ ಬಂದಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದ್ದರಿಂದ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿ ತಪಾಸಣೆಯನ್ನು ಕೈಗೊಂಡಿದ್ದರು. ಬಳಿಕ ಇದೊಂದು ಹುಸಿ ಬೆದರಿಕೆ ಸಂದೇಶ ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


