ಬೆಂಗಳೂರು: ಗವಿಪುರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದ ಮಕರ ಸಂಕ್ರಮಣದಂದು ಸೂರ್ಯರಶ್ಮಿ ಗವಿಗಂಗಾಧರೇಶ್ವರ ಮೂರ್ತಿಯ ಮೇಲೆ ಬೀಳುತ್ತಿತ್ತು. ಆದರೆ ಈ ಬಾರಿ ಮೋಡ ಕವಿದ ವಾತಾವರಣವಿದ್ದರಿಂದ ಸೂರ್ಯರಶ್ಮಿ ಬೀಳಲಿಲ್ಲ.
ಇನ್ನು ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆಯವ ಈ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಅಪಾರವಾದ ಭಕ್ತ ಸಮೂಹ ನೆರೆದಿತ್ತು. ನೇರ ದರ್ಶನದ ಅವಕಾಶ ಎಲ್ಲರಿಗೂ ಸಿಗದ ಕಾರಣ ಎಲ್‌ಇಡಿ ಸ್ಕ್ರೀನಿಂಗ್ ಅನ್ನೂ ಸಹ ಆಯೋಜಿಸಲಾಗಿತ್ತು. ಆದರೆ ಸೂರ್ಯರಶ್ಮಿ ಬೀಳದೆ ಇರುವುದು ಎಲ್ಲರಲ್ಲೂ ನಿರಾಸೆ ಉಂಟುಮಾಡಿದೆ. ದೇವಾಲಯದ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಈ ರೀತಿಯಾಗಿದ್ದು, ಇದು ಅಪಾಯದ ಮುನ್ಸೂಚನೆಯ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ.
ಇನ್ನು ಕೊವಿಡ್ ಆಗಮಿಸಿದ ವರ್ಷದಲ್ಲಿ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನನ್ನು ಸ್ಪಲ್ಪ ಹೊತ್ತು ಮಾತ್ರ ಸ್ಪರ್ಶಿಸಿತ್ತು. ಆ ಸಂದರ್ಭದಲ್ಲಿ ಅರ್ಚಕರು ಈ ಬಾರಿ ಸಾವು ನೋವು ಆಗಲಿದೆ ಎಂದಿದ್ದರು. ಅದರಂತೆ ಕೊವಿಡ್‌ನಿಂದ ಅಪಾರ ಸಾವುಂಟಾಯಿತು. ಹೀಗಾಗಿ ಭಕ್ತರಲ್ಲಿ ಆತಂಕ ಉಂಟಾಗಿದೆ.
ಹೀಗಿರುವಾಗ ಈ ಕುರಿತು ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಪ್ರತಿಕ್ರಿಯಿಸಿದ್ದು “ಸಂಜೆ 5:20 ರಿಂದ 5:23ರ ಸುಮಾರಿಗೆ ದೇಗುಲ ಬಲಭಾಗದ ಕಮಾನಿನಿಂದ ಕಿಟಕಿಯ ಮೂಲಕ ಪ್ರವೇಶಿಸಬೇಕಿದ್ದ ಸೂರ್ಯ ರಶ್ಮಿ ಮೋಡ ಕವಿದಿದ್ದರಿಂದ ಗೋಚರವಾಗಿಲ್ಲ. ಇದರಿಂದ ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯುಂಟಾಗಿದೆ. ಶಿವಲಿಂಗಕ್ಕೆ ಸೂರ್ಯನ ಪೂಜೆ ನಡೆದಿದೆ. ಈಶ್ವರನ ಅನುಗ್ರಹ ನಾಳೆಯಿಂದ ಎಲ್ಲರಿಗೂ ಸಿಗುತ್ತದೆ. ಸೂರ್ಯರಶ್ಮಿಯು ಖಂಡಿತವಾಗಿಯೂ ಶಿವಲಿಂಗವನ್ನ ಸ್ಪರ್ಶಿಸಿದೆ. ಆದರೆ, ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿಯ ಸ್ಪರ್ಶವಾಗಿದೆ ಎಂದು ತಿಳಿದಿಲ್ಲ. ಪ್ರಸಕ್ತ ವರ್ಷದಲ್ಲಿ ಯಾವುದೇ ಕೆಡುಕುಗಳು ಉಂಟಾಗುವುದಿಲ್ಲ” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


