ಜೈಪುರ: ನಿನ್ನೆ ( ಏಪ್ರಿಲ್ 13 ) ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ನಾಲ್ಕನೇ ಗೆಲುವನ್ನು ಕಂಡಿತು.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 174 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ 17.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು.
ರಾಜಸ್ಥಾನ್ ರಾಯಲ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಉತ್ತಮ ಆರಂಭ ನೀಡಿದ ಈ ಜೋಡಿ ಟೂರ್ನಿಯಲ್ಲಿ ಮೂರನೇ ಬಾರಿಗೆ ಓಪನಿಂಗ್‌ನಲ್ಲಿ 50+ ರನ್ ಬಾರಿಸಿತು.
ಫಿಲ್ ಸಾಲ್ಟ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 65 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ 62 ರನ್ ಬಾರಿಸಿ ಅಜೇಯರಾಗಿ ಉಳಿದರು. ದೇವದತ್ ಪಡಿಕ್ಕಲ್ ಅಜೇಯ 40 ( 28 ) ರನ್ ಬಾರಿಸಿದರು.
ಹೀಗೆ ಸುಲಭ ಗೆಲುವು ಸಾಧಿಸಿದ ತಂಡದ ಪರ ಅಜೇಯರಾಗಿ ಉಳಿದು ಮತ್ತೊಮ್ಮೆ ಚೇಸ್ ಮಾಸ್ಟರ್ ಎಂಬುದನ್ನು ಸಾಬೀತುಪಡಿಸಿರುವ ಕೊಹ್ಲಿ ಇನ್ನಿಂಗ್ಸ್ ಆಡುವ ವೇಳೆ ಸುಸ್ತಾಗಿ ನೆಲಕ್ಕೆ ತಲೆಬಾಗಿಸಿ ಸುಧಾರಿಸಿಕೊಂಡರು. ಅಲ್ಲದೇ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬಳಿ ತಮ್ಮ ಹೃದಯದ ಬಡಿತವನ್ನು ಮುಟ್ಟಿ ನೋಡುವಂತೆ ಹೇಳಿದ್ದಾರೆ. ಈ ವೇಳೆ ಸಂಜು ಸ್ಯಾಮ್ಸನ್ ಕೊಹ್ಲಿ ಎದೆಬಡಿತವನ್ನು ಮುಟ್ಟಿ ನೋಡಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಕಂಡು ಅಭಿಮಾನಿಗಳು ಕೊಹ್ಲಿಗೆ ಏನಾಯಿತು ಎಂದು ಆತಂಕಕ್ಕೊಳಗಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


