ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಎದುರಾಳಿ ಆಟಗಾರನ ಜೊತೆ ಅತಿಯಾದ ವರ್ತನೆ ತೋರಿದ ಕಾರಣಕ್ಕೆ ಪಂದ್ಯ ಸಂಭಾವನೆಯ 15% ದಂಡವನ್ನು ವಿಧಿಸಲಾಗಿದೆ.
ನಿನ್ನೆ ( ಜುಲೈ 13 ) ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನ ಆರನೇ ಓವರ್‌ನ ಐದನೇ ಎಸೆತಕ್ಕೆ ಬೆನ್ ಡಕೆಟ್ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಸಿರಾಜ್ ಎಸೆದ ಈ ಎಸೆತವನ್ನು ಬೌಂಡರಿಗಟ್ಟಲು ಯತ್ನಿಸಿದ ಬೆನ್ ಡಕೆಟ್ ಬುಮ್ರಾಗೆ ಕ್ಯಾಚ್ ನೀಡಿ ಔಟ್ ಆದರು.
ಈ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಬೆನ್ ಡಕೆಟ್ ಬಳಿ ಬಂದು ಕಿರುಚಿ ವಿಕೆಟ್ ಪಡೆದ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ನೆಟ್ಟಿಗರು ಐಸಿಸಿ ವಿರುದ್ಧ ಕಿಡಿಕಾರಿದ್ದು, ಇಷ್ಟಕ್ಕೇ ದಂಡ ವಿಧಿಸುವ ಕ್ರಮ ಸರಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಆಟಗಾರರೂ ಸಹ ಭಾರತದ ಬ್ಯಾಟಿಂಗ್ ವೇಳೆ ಇಂತಹ ಹಲವಾರು ಕೀಟಲೆ ಮಾಡಿದ್ದಾರೆ. ಅವುಗಳಿಗೆ ಇಲ್ಲದ ದಂಡ ಇದಕ್ಕೆ ಏಕೆ ಎಂದು ಪ್ರಶ್ನೆ ಹಾಕಿದ್ದಾರೆ.
ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇತ್ತ ಭಾರತ ಸಹ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇನ್ನು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 192 ರನ್‌ಗಳಿಗೆ ಆಲ್‌ಔಟ್ ಆಗಿ ಭಾರತಕ್ಕೆ 193 ರನ್‌ಗಳ ಗುರಿಯನ್ನು ನೀಡಿದೆ.
ಇತ್ತ ಈ ಗುರಿಯನ್ನು ಬೆನ್ನಟ್ಟಿರುವ ಭಾರತ ನಾಲ್ಕನೇ ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಈ ಮೂಲಕ ಕೊನೆಯ ದಿನವಾದ ಇಂದು ಭಾರತಕ್ಕೆ ಗೆಲ್ಲಲು 135 ರನ್‌ಗಳು ಹಾಗೂ ಇಂಗ್ಲೆಂಡ್‌ಗೆ 6 ವಿಕೆಟ್‌ಗಳ ಅಗತ್ಯವಿದೆ.
ಮೈಸೂರು ನಗರ ಪೊಲೀಸರಿಂದ ಬೃಹತ್ ಕಾರ್ಯಾಚರಣೆ; 63 ಲಕ್ಷ ಮೌಲ್ಯದ ಕಳವು ಸ್ವತ್ತು ವಶ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


