ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬದಲಾಗಿ ನೂತನ ವಿಶ್ವವಿದ್ಯಾಲಯವನ್ನು ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ ಅವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿ ಸ್ಥಾಪಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರಶ್ನೆ ಕೇಳಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿದೆ. ಆದರೆ ಅಲ್ಲಿ ಸ್ಥಳಾವಕಾಶ ಇಲ್ಲ. ತಮ ಕ್ಷೇತ್ರ ಹುನಗುಂದ ವ್ಯಾಪ್ತಿಯ ಕೂಡಲಸಂಗಮದಲ್ಲಿ 500 ಎಕರೆ ಜಮೀನು, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದೆ. ಅಲ್ಲಿ 900 ಕೋಟಿ ರೂ.ಗಳ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಶರಣ ಗ್ರಾಮ ನಿರ್ಮಾಣ ಮಾಡಲಾಗುತ್ತಿದೆ. ಆನಂತರವೂ ಜಮೀನು ಉಳಿಯಲಿದ್ದು ಅದರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಸುಧಾಕರ್, ಈ ಹಿಂದೆ ಏಳು ವಿಶ್ವವಿದ್ಯಾಲಯಗಳನ್ನು ಮಂಜೂರು ಮಾಡುವಾಗ ಹೊಸದಾಗಿ ಜಮೀನು ಖರೀದಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ನೂತನ ವಿಶ್ವವಿದ್ಯಾಲಯಗಳು ಆರಂಭಗೊಳ್ಳಬೇಕು ಎಂಬ ನಿಯಮ ಮಾಡಲಾಗಿದೆ ಎಂದರು.
ತಮ್ಮ ಸರ್ಕಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯಗಳು ಸ್ಥಿತಿಗತಿ ಅಧ್ಯಯನ ನಡೆಸುತ್ತಿದೆ. ಬಸವಕಲ್ಯಾಣದಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪಿಸುವ ಸಾಧಕ ಬಾಧಕಗಳ ಬಗ್ಗೆಯೂ ಉಪಸಮಿತಿಯಲ್ಲಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ದರ್ಶನ್ ಜಾಮೀನು ರದ್ದು ಕುರಿತು ರಮ್ಯಾ ಹೀಗೆ ಪೋಸ್ಟ್ ಹಾಕಿದ್ದಾರೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


