ಸರ್ಕಾರದ ವಿರುದ್ಧದ ಕಾನೂನು ಸಮರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಅಲೋಕ್ ಕುಮಾರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿದೆ.
ಅಲೋಕ್ ಕುಮಾರ್ ಹಾಲಿ ತರಬೇತಿ ವಿಭಾಗ ಬೆಂಗಳೂರು ಎಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿರುವುದನ್ನು ಪ್ರಶ್ನಿಸಿ ಅವರು ಸಿಎಟಿ ಮೊರೆ ಹೋಗಿದ್ದರು.
3ನೇ ನ್ಯಾಯಾಧೀಶರಿಗೆ ವರ್ಗಾವಣೆ: ಸಿಎಟಿಗೆ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆಗೊಂಡಿತ್ತು. ಮೊದಲು ದ್ವಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಆದರೆ ಒಮ್ಮತ ಮೂಡಿಸುವ ತೀರ್ಪು ಬಂದಿರಲಿಲ್ಲ.
ನ್ಯಾಯಮೂರ್ತಿ ಬಿ.ಕೆ.ಶ್ರೀವಾತ್ಸವ ಇಲಾಖಾ ತನಿಖೆ ರದ್ದುಗೊಳಿಸಲು ಆದೇಶಿಸಿದ್ದರು. ಆದರೆ ನ್ಯಾಯಮೂರ್ತಿ ಸಂತೋಷ್ ಮೆಹ್ರಾ ಅಲೋಕ್ ಕುಮಾರ್ ಅರ್ಜಿಯನ್ನು ವಜಾಗೊಳಿಸಿದ್ದರು. ಇಬ್ಬರು ಭಿನ್ನ ತೀರ್ಪು ನೀಡಿದ ಹಿನ್ನಲೆಯಲ್ಲಿ ಅರ್ಜಿಯನ್ನು ಹೊಸದಾಗಿ ವಿಚಾರಣೆಗೆ ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲಾಗಿತ್ತು.
ಕರ್ನಾಟಕದಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಸಿಬಿಯ ತನಿಖೆ ನಡೆಸಿ ಬಿ-ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅಲೋಕ್ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆ ಕಯ ಬಿಡಲು ತೀರ್ಮಾನಿಸಿದ್ದರು. ಆದರೆ ಆದೇಶವಾಗಿರಲಿಲ್ಲ.
2023ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಹೊಸ ಸರ್ಕಾರ ಇಲಾಖಾ ವಿಚಾರಣೆ ಮುಂದುವರೆಸಲು ತೀರ್ಮಾನ ಮಾಡಿತು. ಇದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ ಸರ್ಕಾರದ ಆದೇಶದಕ್ಕೆ ಮಧ್ಯಂತರ ತಡೆ ನೀಡಿತ್ತು. ಈಗ ಸಿಎಟಿಯ ಮೂರನೇ ನ್ಯಾಯಾಧೀಶರು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಸರ್ಕಾರದ ಇಲಾಖಾ ವಿಚಾರಣೆ ಆದೇಶವನ್ನು ರದ್ದುಗೊಳಿಸಿದ್ದಾರೆ.
ಅಲೋಕ್ ಕುಮಾರ್ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರುವ ಕಾರಣ ಮುಂಬಡ್ತಿ ಸಹ ಬಾಕಿ ಉಳಿದಿತ್ತು. ಈಗ ಕಾನೂನು ಹೋರಾಟದಲ್ಲಿ ಐಪಿಎಸ್ ಅಧಿಕಾರಿ ಗೆಲುವು ಸಾಧಿಸಿದ್ದು, ಮುಂಬಡ್ತಿ ಸಿಗುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗ ಅಲೋಕ್ ಕುಮಾರ್ ಸಿಸಿಬಿ ಮುಖ್ಯಸ್ಥರಾಗಿದ್ದರು. 2019ರಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ ಎಂಬ ಆರೋಪವಿತ್ತು.
ಆಗ ಕೆಲವು ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬುದು ಆರೋಪವಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಅಲೋಕ್ ಕುಮಾರ್‌ಗೆ ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


