ಬಿಹಾರ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ಶುಕ್ರವಾರ ನಡೆಯುತ್ತಿದೆ. ಎನ್‌ಡಿಎ ಮೈತ್ರಿಕೂಟ 172 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಮುನ್ನುಗ್ಗುತ್ತಿದೆ. ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 122.
ಬಿಹಾರ ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಸದ್ಯದ ಮಾಹಿತಿಯಂತೆ ಎನ್‌ಡಿಎ ಮಹಾಘಟಬಂಧನ್ (67 ಸೀಟು) ಮೈತ್ರಿಕೂಟಕ್ಕಿಂತ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಮಹಾಘಟಬಂಧನ್ ಮೈತ್ರಿಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸುವ ನಿರೀಕ್ಷೆ ಇದೆ. ಸದ್ಯ ಪಕ್ಷ ಮುನ್ನಡೆಯಲ್ಲಿರುವುದು ಕೇವಲ 10 ಸ್ಥಾನಗಳಲ್ಲಿ ಮಾತ್ರ. ಮತ ಎಣಿಕೆಯಲ್ಲಿ ಕಾಂಗ್ರೆಸ್ 5ನೇ ಸ್ಥಾನಕ್ಕೆ ಕುಸಿದಿದೆ.
ಸದ್ಯದ ಮಾಹಿತಿಯಂತೆ
- ಬಿಜೆಪಿ-78
- ಆರ್‌ಜೆಡಿ-52
- ಜೆಡಿಯು-68
- ಎಲ್‌ಜೆಪಿ-17
- ಕಾಂಗ್ರೆಸ್-10 ಸೀಟುಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿವೆ.
ಬಿಹಾರ ರಾಜ್ಯದ 243 ಸೀಟುಗಳ ಪೈಕಿ ಕಾಂಗ್ರೆಸ್ ಪಕ್ಷ ಕಣಕ್ಕಿಳಿದಿರುವುದು ಕೇವಲ 61 ಸೀಟುಗಳಲ್ಲಿ. ಕೆಲವು ಕ್ಷೇತ್ರದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಪಕ್ಷಗಳೇ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಗಳು. ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಎರಡಂಕಿ ಸೀಟುಗಳನ್ನು ಪಡೆಯಲಿದೆಯೇ? ಎಂಬುದು ಈಗಿನ ಚರ್ಚೆಯ ವಿಚಾರವಾಗಿದೆ.
ಬಿಹಾರ ಚುನಾವಣೆ ದಿನಾಂಕ ಘೋಷಣೆ ಆಗುವ ಮೊದಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ‘ಮತದಾರರ ಅಧಿಕಾರ ಯಾತ್ರೆ’ ನಡೆಸಲಾಗಿತ್ತು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸುವುದು ಈ ಯಾತ್ರೆಯ ಉದ್ದೇಶವಾಗಿತ್ತು. ಇಂಡಿಯಾ ಮೈತ್ರಿಕೂಟದ ನಾಯಕರು ಸಹ ಇದರಲ್ಲಿ ಭಾಗವಹಿಸಿದ್ದರು.
16 ದಿನಗಳ ಈ ಯಾತ್ರೆ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳ ಮೂಲಕ ಹಾದುಹೋಗಿ, ಸೆಪ್ಟೆಂಬರ್ 1 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಮುಕ್ತಾಯಗೊಂಡಿತ್ತು. ಆದರೆ ಈ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿಲ್ಲ ಎಂಬುದು ಇಂದಿನ ಫಲಿತಾಂಶದಲ್ಲಿ ಸಾಬೀತಾಗುತ್ತಿದೆ.
ಚುನಾವಣೆಯಲ್ಲಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟದ ಸೀಟು ಹಂಚಿಕೆ ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಹಲವು ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿಗಳೇ ಎದುರಾಳಿಯಾಗಿದ್ದಾರೆ.
ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಅಧಿಕೃತ ಘೋಷಣೆಯನ್ನೇ ಮಾಡಲಿಲ್ಲ. ಮಾಹಿತಿಗಳ ಪ್ರಕಾರ ಆರ್‌ಜೆಡಿ 143, ಕಾಂಗ್ರೆಸ್ 61, ಸಿಪಿಐ(ಎಂಎಲ್) 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಉಳಿದ ಕ್ಷೇತ್ರವನ್ನು ವಿಐಪಿ, ಸಿಪಿಐ(ಎಂ) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ.
ಆರ್‌ಜೆಡಿ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಮತ್ತು ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿಗೆ ಡಿಸಿಎಂ ಸ್ಥಾನ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ನಿರೀಕ್ಷೆ ಇದೆ.
ಬಿಹಾರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ, ಮಹಾಘಟಬಂಧನ್ ಪರವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರ್ಜರಿ ಪ್ರಚಾರವನ್ನು ನಡೆಸಿದ್ದರು. ಬಿಹಾರದ ಯುವಕರಿಗೆ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿದ್ದರು.
ಆದರೆ ಪಕ್ಷದ ಸೀಟು ಹಂಚಿಕೆ ಗೊಂದಲ ಭಾರೀ ಹಿನ್ನಡೆಯನ್ನು ತಂದಿದೆ. 2020ರ ಚುನಾವಣೆಯಲ್ಲಿ 19 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಈಗ 5 ಸೀಟುಗಳಲ್ಲಿ ಸಹ ಮುನ್ನಡೆಯನ್ನು ಪಡೆದಿಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯದ ಹಿರಿಯ ನಾಯಕರು ಮೈತ್ರಿಗೆ, ಸೀಟು ಹಂಚಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಸೀಟು ಹಂಚಿಕೆ ಮಾಡಿಕೊಳ್ಳುವಾಗ ನಮ್ಮ ಪ್ರಭಾವ ಇರುವ ಕ್ಷೇತ್ರವನ್ನು ಆರ್‌ಜೆಡಿಗೆ ಬಿಟ್ಟುಕೊಡುತ್ತಿದ್ದೇವೆ ಎಂದು ದೆಹಲಿ ತನಕ ಹೋಗಿದ್ದರು. ಆದರೆ ಹೈಕಮಾಂಡ್ ಆದೇಶದ ಹಿನ್ನಲೆಯಲ್ಲಿ ಮೌನವಾಗಿದ್ದರು. ಇದು ಈಗ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರಭಾವ ಬೀರಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


