ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಪ್ರಕಟವಾಗಿದೆ. ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲಿದೆ. ಮಹಾಘಟಬಂಧನ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಸದ್ಯದ ಮಾಹಿತಿಯಂತೆ ಎನ್‌ಡಿಎ ಮೈತ್ರಿಕೂಟ 202 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬಿಹಾರ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122. ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಶುಕ್ರವಾರ ಮತ ಎಣಿಕೆ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಬಂಧನ್ 29 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಪಕ್ಷ 61 ಸೀಟುಗಳಲ್ಲಿ ಕಣಕ್ಕಿಳಿದಿತ್ತು. ಆದರೆ 2 ಸೀಟುಗಳಲ್ಲಿ ಮನ್ನಡೆಯಲ್ಲಿದೆ. ಒಂದು ಸೀಟು ಸಹ ಗೆದ್ದಿಲ್ಲ.
ರಾಹುಲ್ ಗಾಂಧಿಗೆ ಅಭಿನಂದನೆ; ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರತಿಕ್ರಿಯೆ ನೀಡಿದ್ದಾರೆ. ‘ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು!’ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆರ್.ಅಶೋಕ, ‘ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ ಆದರೆ Rahul Gandhi ಅವರು ಕಾಂಗ್ರೆಸ್ ಪಕ್ಷವನ್ನ ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ’ ಎಂದು ಹೇಳಿದ್ದಾರೆ.
‘ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ಸನ್ಮಾನ್ಯ ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್‌ಜೆಡಿ – ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟಿದ್ದು’ ಎಂದು ಅಶೋಕ ಟೀಕಿಸಿದ್ದಾರೆ.
‘ಆದರೆ ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ “ವೋಟ್ ಚೋರಿ” ಪ್ರಹಸನವ್ನ ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ಶ್ರೀ Narendra Modi ಹಾಗು ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ’ ಎಂದು ಅಶೋಕ ಹೇಳಿದ್ದಾರೆ.
‘ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿ ಬಂದಿರುವ ಸ್ಥಿತಿಯೇ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ಬರುವ ದಿನ ಬಹಳ ದೂರವಿಲ್ಲ. ಈಗಾಗಲೇ ಜನಮನ್ನಣೆ ಕಳೆದುಕೊಂಡಿರುವ Indian National Congress – Karnataka ಪಕ್ಷ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನೂರಕ್ಕೆ ನೂರು ಗ್ಯಾರೆಂಟಿ. NDA ಗೆಲುವಿಗೆ ಕಾರಣೀಭೂತರಾದ BJP Bihar @Jduonline ಸೇರಿದಂತೆ ಮೈತ್ರಿಕೂಟದ ಎಲ್ಲ ನಾಯಕರು, ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಅಶೋಕ ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶ; ಕೇಂದ್ರ ಚುನಾವಣಾ ಆಯೋಗದ ವೆಬ್ ಸೈಟ್ ಮಾಹಿತಿ ಪ್ರಕಾರ ಸದ್ಯ ಬಿಜೆಪಿ 91, ಜೆಡಿಯು 83, ಆರ್‌ಜೆಡಿ 27, ಎಲ್‌ಜೆಪಿಆರ್‌ವಿ 19, ಕಾಂಗ್ರೆಸ್ 5, ಎಐಎಂಐಎಂ 5, ಹೆಚ್‌ಎಎಂಎಸ್ 5 ಮತ್ತು ಇತರರು 8 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ 5, ಜೆಡಿಯು 6, ಆರ್‌ಜೆಡಿ 1 ಸೀಟುಗಳಲ್ಲಿ ಜಯಗಳಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


