ಹೈದರಾಬಾದ್: ಪುಷ್ಪ ದ ರೂಲ್ ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ನಗರದ ಸಂದ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಬಂಧನವಾಗಿದ್ದ ತೆಲುಗು ನಟ ಅಲ್ಲು ಅರ್ಜುನ್ ಚಂಚಲಗುಡ ಸೆಂಟ್ರಲ್ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ನಿನ್ನೆಯೇ ಜಾಮೀನು ಸಿಕ್ಕಿತ್ತಾದರೂ ಜಾಮೀನು ಪ್ರತಿ ಜೈಲಾಧಿಕಾರಿಗಳಿಗೆ ಸಿಗದ ಕಾರಣ ಇಂದು ಬೆಳ್ಳಂಬೆಳಗ್ಗೆಯೇ ಅಲ್ಲು ಅರ್ಜುನ್ ಬಿಡುಗಡೆಯಾಗಿದೆ.
ಪುಷ್ಪ-2 ಚಿತ್ರದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧವಾಗಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿ ನಾಂಪಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಬಳಿಕ ತೆಲಂಗಾಣ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು(ಡಿ.14) ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಬೆಂಬಲ ನೀಡಿದ ಎಲ್ಲರಿಗೂ ಹಾಗೂ ನನ್ನ ಎಲ್ಲಾ ಅಭಿಮಾನಿಗಳಿಗೂ ನಾನು ಧನ್ಯವಾದ ಸಮರ್ಪಿಸುತ್ತಿದ್ದೇನೆ. ಇನ್ನು ನನ್ನ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಕ್ಷೇಮವಾಗಿದ್ದೇನೆ ಎಂದು ಹೇಳಿದ್ದಾರೆ.
ನಾನು ಕಾನೂನು ಪಾಲಿಸುವ ನಾಗರೀಕನಾಗಿದ್ದು, ಎಲ್ಲದಕ್ಕೂ ನಾನು ಸಹಕರಿಸುತ್ತೇನೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ನಾನು ಇನ್ನೊಮ್ಮೆ ಸಂತಾಪ ಕೋರುತ್ತೇನೆ. ಅದೊಂದು ದುರದೃಷ್ಟಕರ ಘಟನೆ. ಹಾಗಾಗಿ ನಾವು ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಭೇಟಿಗೆ ಚಿತ್ರತಂಡ ಲಗ್ಗೆ
ಇನ್ನು ನಟ ಅಲ್ಲು ಅರ್ಜುನ್ ಬಿಡುಗಡೆಯಾಗಿ ಮನೆ ತಲುಪಿದ ಕೂಡಲೇ ಚಿತ್ರರಂಗದ ಹಲವು ಕಲಾವಿದರು ಅಲ್ಲು ಅರ್ಜುನ್ ಭೇಟಿ ಮಾಡಲು ಆಗಮಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಪತ್ನಿ, ನಟ ವಿಜಯ್ ದೇವರಕೊಂಡ ಸೇರಿದಂತೆ ಹಲವು ಕಲಾವಿದರು ಅಲ್ಲು ಅರ್ಜುನ್ ಭೇಟಿ ಮಾಡಿ ಮಾತನಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


