ನಟ ಅಲ್ಲು ಅರ್ಜುನ್ ಬಂಧನದ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ತೆಲಂಗಾಣ ಸರ್ಕಾರ ಬೇಕಂತಲೇ ಅಲ್ಲು ಅರ್ಜುನ್ ಅವರನ್ನು ಬಂಧಿಸಿದೆ, ವೈಯಕ್ತಿಕ ಕಾರಣಗಳಿಂದ ಬಂಧಿಸಲಾಗಿದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಹಾಗೂ ವಿರೋಧ ಪಕ್ಷಗಳು ಆರೋಪಿಸುತ್ತಿದ್ದಾರೆ.
ಅದರಲ್ಲೂ ಪ್ರಕರಣದಲ್ಲಿ ಅಲ್ಲು ಅರ್ಜುನ್ ಎ11 ಆರೋಪಿ. ಹೀಗಿರುವಾಗ ಅವರನ್ನು ಬೆಡ್‌ರೂಂಗೆ ನುಗ್ಗಿ ಬಂಧಿಸಿ ಕರೆದೊಯ್ಯುವ ಅಗತ್ಯವಿರಲಿಲ್ಲ. ಇದನ್ನು ಗಮನಿಸಿದರೆ ಅಲ್ಲು ಅರ್ಜುನ್ ಬಂಧನದ ಹಿಂದೆ ವೈಯಕ್ತಿಕ ಕಾರಣ ಇರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಎನುಮುಲ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಅಲ್ಲು ಅರ್ಜುನ್ ಮೇಲೆ ನಮಗೇಕೆ ದ್ವೇಷ? ಅವರ ಮಾವ ಚಿರಂಜೀವಿ ಸಹ ನಮ್ಮ ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿದ್ದಾರೆ. ಅಂದು ಚಿತ್ರಮಂದಿರದಲ್ಲಿ ಹಂಗಾಮಾ ಮಾಡದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
“ಈ ದೇಶದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್ ಯಾಕೆ ಬಂಧನವಾಗಿದ್ದರು, ಈ ದೇಶದಲ್ಲಿ ಸಾಮಾನ್ಯ ಪ್ರಜೆಯಿಂದ ಪ್ರಧಾನಿವರೆಗೆ ಕಾನೂನು ಎಲ್ಲರಿಗೂ ಒಂದೇ. ‘ಪುಷ್ಪ-2’ ಚಿತ್ರಕ್ಕೆ ಬೆನಿಫಿಟ್ ಶೋ ಜೊತೆಗೆ ಟಿಕೆಟ್ ದರ ಹೆಚ್ಚಿಸಲು ನಾವೇ ಅನುಮತಿ ಕೊಟ್ಟಿದ್ದೆವು. ಆದರೆ ಪ್ರೀಮಿಯರ್ ಶೋಗೆ ಯಾವುದೇ ಮಾಹಿತಿ ನೀಡದೇ ಅಲ್ಲು ಅರ್ಜುನ್ ಬಂದರು. ಆಗ ಕಾಲ್ತುಳಿತ ಉಂಟಾಗಿ ಮಹಿಳೆ ಮೃತಪಟ್ಟಿದ್ದಾರೆ. ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ” ಎಂದು ರೇವಂತ್ ರೆಡ್ಡಿ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು “ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿ, 11 ದಿನಗಳ ಬಳಿಕ ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಬೇಲ್ ಸಹ ಸಿಕ್ಕಿದೆ. ಆದರೆ ಬೇಕಂತಲೇ ಬಂಧಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆತನ ನಟನಾ? ರಾಜಕೀಯ ವ್ಯಕ್ತಿನಾ? ಎನ್ನುವುದಲ್ಲ, ತಪ್ಪು ಯಾರು ಮಾಡಿದ್ದಾರೆ ಎನ್ನುವುದನ್ನು ನೋಡುತ್ತೇವೆ. ಅವತ್ತು ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೋಗಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ” ಎಂದರು.
“ಅಲ್ಲು ಅರ್ಜುನ್ ಅವತ್ತು ಸುಮ್ಮನೆ ಬಂದು ಸಿನಿಮಾ ನೋಡಿ ಹೋಗಬೇಕಿತ್ತು. ಅದು ಬಿಟ್ಟು ಕಾರ್ ಏರಿ ಅಭಿಮಾನಿಗಳ ಕಡೆ ಕೈಬೀಸುತ್ತಾ ರ್ಯಾಲಿ ರೀತಿ ಸನ್ನಿವೇಶ ಸೃಷ್ಟಿಸಿದ್ದರು. ಈ ಹಂಗಾಮಾದಿಂದಲೇ ಕಾಲ್ತುಳಿತ ಉಂಟಾಗಿ ಒಬ್ಬ ಮಹಿಳೆ ಪ್ರಾಣಬಿಟ್ರು. ಅಲ್ಲು ಅರ್ಜುನ್ ಸಿನಿಮಾ ನೋಡಬೇಕು ಎಂದುಕೊಂಡಿದ್ದರೆ ಯಾವುದಾದರೂ ಸ್ಟುಡಿಯೋದಲ್ಲೋ, ತಮ್ಮ ಮನೆಯಲ್ಲೋ ನೋಡಬಹುದಿತ್ತು. ಕೊನೆ ಪಕ್ಷ ಚಿತ್ರಮಂದಿರಕ್ಕೆ ಹೋಗುವಂತಿದ್ದರೆ ಪೊಲೀಸ್ ಭದ್ರತೆ ಪಡೆಯಬೇಕಿತ್ತು. ಅಲ್ಲು ಅರ್ಜುನ್ ಚಿಕ್ಕಂದಿನಿಂದ ನನಗೆ ಗೊತ್ತು. ಸುಖಾ ಸುಮ್ಮನೆ ಯಾಕೆ ಬಂಧಿಸುತ್ತಾರೆ ಹೇಳಿ” ಎನ್ನುವ ಮೂಲಕ ಬಂಧನದ ಹಿಂದಿನ ಕಾರಣವನ್ನು ಮನವರಿಕೆ ಮಾಡಿಸುವ ಯತ್ನ ಮಾಡಿದರು.
ಏನಿದು ಪ್ರಕರಣ?
ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೂಲ್ ಸಿನಿಮಾ ಬಿಡುಗಡೆಯ ಹಿಂದಿನ ದಿನ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಪ್ರೀಮಿಯರ್ ಶೋ ವೀಕ್ಷಿಸಲು ನಟ ಅಲ್ಲು ಅರ್ಜುನ್ ಸಹ ಬಂದಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು ಹಾಗೂ ಅವರ ಮಗ ಗಾಯಗೊಂಡಿದ್ದ. ಈ ಕುರಿತು ರೇವತಿ ಪತಿ ಚಿತ್ರಮಂದಿರ ಹಾಗೂ ಅಲ್ಲು ಅರ್ಜುನ್ ವಿರುದ್ಧ ದೂರು ನೀಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


