ಉತ್ತರಪ್ರದೇಶ: ವರ ಹಾಗೂ ಆತನ ತಂದೆಯ ಅನಾಗರಿಕ ನಡೆಯಿಂದ ವಿವಾಹವೊಂದು ಕೊನೆ ಹಂತದಲ್ಲಿ ಮುರಿದುಬಿದ್ದಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸದಾರ್ ಬಜಾರ್‌ನ ಮುರಳಿ ಮನೋಹರ್‌ರವರ ಪುತ್ರಿ ಜ್ಯೋತಿ ಎಂಬವರ ವಿವಾಹ ಪ್ರೇಮ್‌ನಗರದ ನಿವಾಸಿ ರಾಮ್ ಅವತಾರ್ ಅವರ ಪುತ್ರ ರಿಷಬ್ ಎಂಬಾತನ ಜೊತೆ ನಿಶ್ಚಯವಾಗಿತ್ತು. ಆದರೆ ವರ ಹಾಗೂ ಆತನ ತಂದೆ ಮಾಡಿದ ಕೆಲಸಕ್ಕೆ ಬೇಸತ್ತ ವಧು ಜ್ಯೋತಿ ಕೊನೆ ಕ್ಷಣದಲ್ಲಿ ಮದುವೆಯೇ ಬೇಡ ಎಂದು ಹಿಂದೆ ಸರಿದಿದ್ದಾಳೆ.
ಎಂಟು ತಿಂಗಳ ಹಿಂದೆ ಎರಡೂ ಕುಟುಂಬಗಳು ಮಾತುಕತೆ ನಡೆಸಿದ ಸಂದರ್ಭದಲ್ಲಿ ವರನ ತಂದೆ ನಿಮ್ಮ ಮಗಳನ್ನು ಒಂದು ಜತೆ ಬಟ್ಟೆಯೊಂದಿಗೆ ಕಳುಹಿಸಿಕೊಡಿ ಸಾಕು ಎಂದು ಹೇಳಿದ್ದರಂತೆ. ಮೇ ತಿಂಗಳಿನಲ್ಲಿ ನಗರದ ದೊಡ್ಡ ಹೊಟೇಲ್‌ವೊಂದರಲ್ಲಿ ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ವಧು ತಂದೆ ನಿಶ್ಚಿತಾರ್ಥ ಮಾಡಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ವರನಿಗೆ ಚಿನ್ನದ ಸರ ಹಾಗೂ ಉಂಗುರ, ಜತೆಗೆ ಐದು ಲಕ್ಷ ರೂ ಹಣವನ್ನೂ ಸಹ ನೀಡಿದ್ದಾರೆ.
ಇದಾದ ಬಳಿಕ ವರನ ಕುಟುಂಬ ಆಗಾಗ ಬೇಡಿಕೆಗಳನ್ನು ಇಡುತ್ತಲೇ ಬಂದಿದೆ. ಇತ್ತ ಮಗಳು ಖುಷಿಯಾಗಿ ಇದ್ದರೆ ಸಾಕು ಎಂದು ವರನ ಕುಟುಂಬದ ಬೇಡಿಕೆಗಳನ್ನು ವಧು ತಂದೆ ಮುರಳಿ ಮನೋಹರ್ ಈಡೇರಿಸುತ್ತಲೇ ಬಂದಿದ್ದಾರೆ.
ಅಲ್ಲದೇ ವಿವಾಹ ಆಹ್ವಾನ ಪತ್ರಿಕೆಯನ್ನು ತೆಗೆದುಕೊಂಡು ವರನ ಮನೆಗೆ ಹೋದಾಗಲೂ ಫ್ರಿಡ್ಜ್, ಎಸಿ, ವಾಷಿಂಗ್ ಮಷಿನ್ ಹಾಗೂ ಇನ್ನಿತರೆ ಗೃಹೋಪಯೋಗಿ ವಸ್ತುಗಳ ಜತೆಗೆ 1.20 ಲಕ್ಷ ರೂ ಹಣವನ್ನೂ ನೀಡಿದ್ದಾರೆ. ಇಷ್ಟೆಲ್ಲ ನೀಡಿದರೂ ದುರಾಸೆಗೆ ಎಲ್ಲೆ ಇಲ್ಲ ಎನ್ನುವ ಹಾಗೆ ವರನ ಕುಟುಂಬ ಮದುವೆಗೆ ವರನನ್ನು ಕರೆತಂದು ಮಂಟಪದ ಬಳಿ 20 ಲಕ್ಷ ರೂ ಹಾಗೂ ಒಂದು ಬ್ರಿಝಾ ಕಾರಿಗೆ ಬೇಡಿಕೆ ಇಟ್ಟಿದ್ದಾರೆ.
ವರನ ಕುಟುಂಬದ ಬೇಡಿಕೆಯಂತೆ ಮನೆಯ ಎಲ್ಲ ಸದಸ್ಯರಿಗೂ ಚಿನ್ನದ ಆಭರಣ ನೀಡಿ, ಯುಗ್‌ವೀಣಾ ಲೈಬ್ರರಿ ಎಂಬ ದುಬಾರಿ ಮಂಟಪದಲ್ಲಿ ವಿವಾಹ ಆಯೋಜಿಸಿದ್ದ ವಧುವಿನ ತಂದೆ ಇದ್ದಕ್ಕಿದ್ದಂತೆ ಮತ್ತೆ ಇಷ್ಟು ದೊಡ್ಡ ಬೇಡಿಕೆ ಕಂಡು ಕಂಗಾಲಾಗಿದ್ದಾರೆ. ವಿವಾಹದ ಬಳಿಕ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ವರ ಹಾಗೂ ತಂದೆ ವಾಪಸ್ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಹೆದರಿದ ವಧುವಿನ ತಂದೆ ವರನ ತಂದೆಯನ್ನು ಬೇಡಿಕೊಂಡಿದ್ದು, ಈ ಸಂದರ್ಭದಲ್ಲಿ ವರ ಹಾಗೂ ಆತನ ತಂದೆ ವಧುವಿನ ತಂದೆಯನ್ನು ತಳ್ಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಧು ಜ್ಯೋತಿ ತಂದೆ ಹಾಗೂ ಸಹೋದರನನ್ನು ಎಲ್ಲರೆದುರು ಅವಮಾನಿಸಿದ ಇಂಥ ನೀಚ ಜನರ ಮನೆಗೆ ತಾನು ಸೊಸೆಯಾಗಿ ಹೋಗಲು ಇಚ್ಛಿಸುವುದಿಲ್ಲ, ಹಣದ ದುರಾಸೆ ಇರುವ ವರ ತನಗೆ ಬೇಕಾಗಿಲ್ಲ ಎಂದು ವಿವಾಹವನ್ನು ರದ್ದುಗೊಳಿಸಿದ್ದಾಳೆ. ನಿಂತಲ್ಲೇ ಕಾರು ಹಾಗೂ ಲಕ್ಷಾಂತರ ಹಣವನ್ನು ಈಗಾಗಲೇ ಸಾಕಷ್ಟು ಹಣ ಸುರಿದಿರುವ ತನ್ನ ತಂದೆಯ ಬಳಿ ಕೇಳುತ್ತೀರಲ್ಲ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವೇ ಎಂದು ವರನ ಕುಟುಂಬದ ವಿರುದ್ಧ ಕಿಡಿಕಾರಿದ್ದಾಳೆ.
ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ವರ ಹಾಗೂ ಆತನ ತಂದೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ ನಂಬಿ ಮಂಡ್ಯದಿಂದ ಕೊಡಗಿಗೆ ಬಂದ ಯುವಕನಿಗೆ ರಾತ್ರಿಯಿಡೀ ಕಿರುಕುಳ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


