ನ್ಯೂ ಚಂಡೀಗಢ್: ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಪಂದ್ಯಕ್ಕೆ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಐಪಿಎಲ್‌ನಲ್ಲೇ ಅತಿಕಡಿಮೆ ಮೊತ್ತ ಹಾಕಿಯೂ ಗೆದ್ದ ತಂಡ ಎಂಬ ದಾಖಲೆ ಬರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ 15.3 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲ್‌ಔಟ್ ಆಗಿ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ 112 ರನ್‌ಗಳ ಸುಲಭ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನಟ್ಟುಲು ಮುಂದಾದ ಕೊಲ್ಕತ್ತಾ ನೈಟ್ ರೈಡರ್ಸ್ 15.1 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಔಟ್ ಆಗಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ 16 ರನ್‌ಗಳ ಗೆಲುವನ್ನು ದಾಖಲಿಸಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಿಯನ್ಶ್ ಆರ್ಯ 22 (12) ಹಾಗೂ ಪ್ರಭ್ ಸಿಮ್ರಾನ್ ಸಿಂಗ್ 30 (15) ರನ್ ಗಳಿಸಿ ಔಟ್ ಆದ ಬಳಿಕ ಪಂಜಾಬ್ ಕಿಂಗ್ಸ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ನಾಯಕ ಶ್ರೇಯಸ್ ಐಯ್ಯರ್ ಡಕ್‌ಔಟ್, ಜೋಶ್ ಇಂಗ್ಲಿಸ್ 2, ನೆಹಲ್ ವಧೇರಾ 10, ಗ್ಲೆನ್ ಮ್ಯಾಕ್ಸ್‌ವೆಲ್ 7, ಸುಯನ್ಶ್ ಶೆಡ್ಗೆ 4, ಮಾರ್ಕೊ ಯಾನ್‌ಸೆನ್ 1, ಶಶಾಂಕ್ ಸಿಂಗ್ 18, ಕ್ಷೇವಿಯರ್ ಬಾರ್ಟ್‌ಲೆಟ್ 11 ಹಾಗೂ ಅರ್ಷ್‌ದೀಪ್ ಸಿಂಗ್ ಅಜೇಯ 1 ರನ್ ಕಲೆಹಾಕಿದರು.
ಸಮಾಧಾನಕರ ಆರಂಭ ಪಡೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಕಳೆದುಕೊಂಡದ್ದು 39 ರನ್‌ಗೆ ಬಳಿಕ ತರಗೆಲೆಗಳ ರೀತಿ ಉದುರಿದ ತಂಡ ಕೆಕೆಆರ್ ಬೌಲಿಂಗ್ ದಾಳಿಗೆ ಮಂಕಾಯಿತು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಹರ್ಷಿತ್ ರಾಣಾ ಮೂರು ವಿಕೆಟ್, ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ತಲಾ ಎರಡು ವಿಕೆಟ್, ಆನ್ರಿಚ್ ನಾರ್ಕಿಯಾ ಹಾಗೂ ವೈಭವ್ ಅರೋರಾ ತಲಾ ಒಂದೊಂದು ವಿಕೆಟ್ ಪಡೆದರು.
ಕೊಲ್ಕತ್ತಾ ನೈಟ್ ರೈಡರ್ಸ್: ಪಂಜಾಬ್ ಕಿಂಗ್ಸ್ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಸಹ 7 ರನ್‌ಗೆ ತನ್ನ ಇಬ್ಬರೂ ಆರಂಭಿಕರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡಿಕಾಕ್ 2 ಹಾಗೂ ನರೈನ್ 5 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಮೂರನೇ ವಿಕೆಟ್ ಒಂದಾದ ನಾಯಕ ಅಜಿಂಕ್ಯಾ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂಶಿ 55 ರನ್‌ಗಳ ಜತೆಯಾಟವಾಡಿದರು. ರಹಾನೆ 17 ರನ್ ಹಾಗೂ ರಘುವಂಶಿ 37 ರನ್ ಕಲೆಹಾಕಿದರು. ಈ ಸಂದರ್ಭದಲ್ಲಿ ಕೆಕೆಆರ್ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ತದನಂತರ ಸಾಲು ಸಾಲಾಗಿ ವಿಕೆಟ್ ಕಳೆದುಕೊಂಡ ಕೆಕೆಆರ್ ನೆಲಕಚ್ಚಿತು. ವೆಂಕಟೇಶ್ ಐಯ್ಯರ್ 7, ರಿಂಕು ಸಿಂಗ್ 2, ರಮಣ್ ದೀಪ್ ಸಿಂಗ್ ಡಕ್‌ಔಟ್, ಆಂಡ್ರೆ ರಸೆಲ್ 17 ರನ್, ಹರ್ಷಿತ್ ರಾಣಾ 3, ವೈಭವ್ ಅರೋರಾ ಡಕ್‌ಔಟ್ ಹಾಗೂ ಅನ್ರಿಚ್ ನಾರ್ಕಿಯಾ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ತಂಡ 79 ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದಾಗ ರಸೆಲ್ ಚಹಲ್ ಎಸೆದ 13ನೇ ಓವರ್‌ನಲ್ಲಿ ಎರಡು ಸಿಕ್ಸ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಗೆಲುವಿನ ಭರವಸೆ ನೀಡಿದರು. ಈ ಓವರ್‌ನಲ್ಲಿ 16 ರನ್ ಹರಿದುಬಂತು. ಆದರೆ 14ನೇ ಓವರ್‌ನ ಎಲ್ಲ ಐದು ಎಸೆತಗಳಲ್ಲಿ ರನ್ ಬಾರಿಸದ ವೈಭವ್ ಅರೋರ ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ 16ನೇ ಓವರ್ ಮೊದಲ ಎಸೆತದಲ್ಲೇ ರಸೆಲ್ ಇನ್‌ಸೈಡ್ ಎಡ್ಜ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಪಂಜಾಬ್ ಕಿಂಗ್ಸ್ ಪರ ಯುಜ್ವೇಂದ್ರ ಚಹಲ್ 4 ವಿಕೆಟ್, ಮಾರ್ಕೊ ಯಾನ್‌ಸೆನ್ 3 ವಿಕೆಟ್, ಕ್ಷೇವಿಯರ್, ಅರ್ಷ್‌ದೀಪ್ ಸಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


