ಬಿಹಾರ ಚುನಾವಣೆ 2025 ದೇಶಾದ್ಯಂತ ಕುತೂಹಲ ಮೂಡಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಸೀಟು ಹಂಚಿಕೆ ಅಂತಿಮವಾಗಿದೆ. ನವೆಂಬರ್ 6, 11ರಂದು ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದಲ್ಲಿದ್ದ ಎಎಪಿ ಪಕ್ಷ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಸೇರಿಲ್ಲ. ಪಕ್ಷ ಮಂಗಳವಾರ ಚುನಾವಣೆಗೆ 48 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ.
ಎಎಪಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದೆ. 243 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ 11, 2ನೇ ಪಟ್ಟಿಯಲ್ಲಿ 48 ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿದೆ. ರಾಜ್ಯದ ಪಕ್ಷ ಉಸ್ತುವಾರಿ ಅಭಿನವ್ ರೈ ಮಾತನಾಡಿ, “ನಮ್ಮ ಮೈತ್ರಿ ಏನಿದ್ದರೂ ಬಿಹಾರದ ಜನರ ಜೊತೆ. ನಾವು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ. ಎಲ್ಲಾ ಸೀಟುಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ” ಎಂದು ಹೇಳಿದ್ದಾರೆ.
“ಪಂಜಾಬ್, ದೆಹಲಿ ಮಾದರಿಯ ಆಡಳಿತವನ್ನು ಜನರು ನೋಡಿದ್ದಾರೆ. ಬಿಹಾರದ ಜನರು ಇದೇ ಮಾದರಿ ಆಡಳಿತ ಬಯಸಿ ಎಎಪಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅಭಿನವ್ ರೈ ತಿಳಿಸಿದ್ದಾರೆ.
“ಬೆಳವಣಿಗೆ ಮತ್ತು ಆಡಳಿತದ ಅನುಮೋದಿತ ಮಾದರಿಯನ್ನು ಪಕ್ಷ ಹೊಂದಿದೆ. ಆಮ್ ಆದ್ಮಿ ಪಕ್ಷ ಮಾಡಿದ ಕೆಲಸದ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ದೆಹಲಿಯಲ್ಲಿ ನಮ್ಮ ಗೆಲುವಿಗೆ ಪೂರ್ವಾಂಚಲ್ ಪ್ರದೇಶದ ಜನರು ಅಪಾರ ಕೊಡುಗೆ ನೀಡಿದ್ದಾರೆ” ಎಂದರು.
“ನಮ್ಮ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಸರ್ಕಾರ ರಚಿಸಲು ನಮಗೆ ಅವರು ಸಹಾಯ ಮಾಡುತ್ತಾರೆ, ಹಾಗಾದರೆ ಬಿಹಾರದಲ್ಲಿ ಏಕೆ ಸಾಧ್ಯವಿಲ್ಲ? ಎಂದು ಕೇಳಿದರು” ಎಂದು ಹೇಳಿದರು.
“ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾವ ಪಕ್ಷದ ಜೊತೆಗೂ ಸಹ ಮೈತ್ರಿ ಇಲ್ಲ. ನಮ್ಮ ಮೈತ್ರಿ ಏನಿದ್ದರೂ ಸಹ ಬಿಹಾರದ ಜನರ ಜೊತೆಗೆ ಮಾತ್ರ” ಎಂದು ಅಭಿನವ್ ರೈ ಸ್ಪಷ್ಟಪಡಿಸಿದರು.
“ಪ್ರಶಾಂತ್ ಕಿಶೋರ್ ಆಡಳಿತದ ಮಾದರಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಎಎಪಿ ಅದನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿ ತೋರಿಸಿದೆ. ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈಗಾಗಲೇ ಬಿಹಾರಕ್ಕೆ ಭೇಟಿ ನೀಡಿ, ರಾಜ್ಯ ಘಟಕಕ್ಕೆ ಸೂಚನೆಗಳನ್ನು ನೀಡಿದ್ದಾರೆ” ಎಂದರು.
ಬಿಜೆಪಿ ಪಟ್ಟಿ ಬಿಡುಗಡೆ: ರಾಜ್ಯದದಲ್ಲಿ 101 ಸೀಟುಗಳಲ್ಲಿ ಕಣಕ್ಕಳಿಯಲಿರುವ ಬಿಜೆಪಿ 71 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಪ್ರಕಟಿಸಲಾಗಿದೆ. ಪಕ್ಷ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಯು & ಬಿಜೆಪಿ ತಲಾ 101 ಸೀಟುಗಳಲ್ಲಿ ಸ್ಪರ್ಧಿಸಲಿವೆ.
ಎನ್‌ಡಿಎ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮಗೊಳಿಸಿಕೊಂಡು ಅಭ್ಯರ್ಥಿಗಳ ಘೋಷಣೆ ಮಾಡುತ್ತಿದೆ. ಹಾಲಿ ರಾಜ್ಯದಲ್ಲಿಎನ್‌ಡಿಎ ಸರ್ಕಾರವೇ ಅಧಿಕಾರದಲ್ಲಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಸೀಟು ಹಂಚಿಕೆ ಬಿಜೆಪಿ 101, ಜೆಡಿಯು 101, ಜನಶಕ್ತಿ ಪಕ್ಷ (ರಾಮ್ ವಿಲಾಸ್) 29, ಎಚ್‌ಎಎಂ 6, ರಾಷ್ಟ್ರೀಯ ಲೋಕಮೋರ್ಚಾ 6.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


