ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಕೈಗೊಳ್ಳಲಾಗಿದೆ. ಸಮೀಕ್ಷೆಯನ್ನು ಪೂರ್ಣಗೊಳಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ. ಈ ಸಮೀಕ್ಷೆ ಮಾಡುವ ಸಿಬ್ಬಂದಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಮೀಕ್ಷೆಗೆ ಗೈರಾದರೆ ಕಠಿಣ ಕ್ರಮದ ಎಚ್ಚರಿಕೆ ಸಹ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಸಮೀಕ್ಷೆಗೆ ಗೈರಾದ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಲ್ಲದೇ ಗೈರಾದರೆ ವೇತನ ಕಡಿತ ಮಾಡಲಾಗುತ್ತದೆ ಎಂಬ ಸುದ್ದಿಗಳು ಈಗ ಹಬ್ಬಿವೆ. ಮಾಹಿತಿ ಪ್ರಕಾರ ನಗರದಲ್ಲಿ 2,300 ಸಮೀಕ್ಷೆದಾರರು ಅನಧಿಕೃತವಾಗಿ ಇಲ್ಲಿಯ ತನಕ ಗೈರಾಗಿದ್ದಾರೆ.
ಬೆಂಗಳೂರು ನಗರದ 46 ಲಕ್ಷ ಮನೆಗಳ ಸಮೀಕ್ಷೆಗೆ 21,000 ಸಿಬ್ಭಂದಿಯನ್ನು ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ. ಸುಮಾರು 18,000 ಸಿಬ್ಬಂದಿ ಪ್ರಮಾಣಿಕವಾಗಿ ತಮಗೆ ನೀಡಿದ ಸ್ಥಳಗಳಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ಹಲವು ಸಿಬ್ಬಂದಿ ಗೈರಾಗಿದ್ದಾರೆ.
ಪ್ರತಿದಿನ ಸಂದೇಶ ಕಳಿಸಿದರೂ, ಪದೇ ಪದೇ ನೋಟಿಸ್ ನೀಡಿದರೂ ಸಹ 2,300 ಸಿಬ್ಬಂದಿ ಅನಧಿಕೃತವಾಗಿ ಗೈರಾಗಿದ್ದು, ಅವರಿಗೆ ವೇತನ ಕಡಿತದ ಆತಂಕ ಎದುರಾಗಿದೆ. ಈ ಕುರಿತು ವರದಿ ಜಿಬಿಎ ಮುಖ್ಯ ಆಯುಕ್ತರಿಗೆ ಸಹ ಸಲ್ಲಿಕೆಯಾಗಿದೆ. ಗೈರಾಗಿದ್ದರೆ ವೇತನ ಕಡಿತಗೊಳಿಸಲು ಚಿಂತನೆ ನಡೆದಿದೆ.
ಸಮೀಕ್ಷೆಯು ಸೆಪ್ಟೆಂಬರ್ 22 ರಿಂದ ಶುರುವಾಗಿದೆ. ಅಕ್ಟೋಬರ್ 7ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಸಮೀಕ್ಷೆ ಕೆಲವು ಜಿಲ್ಲೆಗಳಲ್ಲಿ ಪೂರ್ಣಗೊಂಡಿಲ್ಲ. ಆದ್ದರಿಂದ 10 ದಿನಗಳ ಕಾಲಾವಕಾಶ ನೀಡಿ ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿ ಸಮೀಕ್ಷೆಯ ಅವಧಿ ವಿಸ್ತರಣೆ ಮಾಡಲಾಗಿತ್ತು.
ಸೆಪ್ಟೆಂಬರ್ 26ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮೀಕ್ಷೆ ಕಾರ್ಯಕ್ಕೆ ಮುಂದೆಯೂ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು.
ಅಲ್ಲದೇ ಸಭೆಯಲ್ಲಿ ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾಗಿದ್ದು, ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಚರ್ಚೆ ನಡೆದಿತ್ತು. ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು.
ಬೆಂಗಳೂರು ಸಮೀಕ್ಷೆ ವಿವರ
- ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 14.27 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಬೀಗ ಹಾಕಿದ ಮನೆಗಳಲ್ಲಿ ಸಮೀಕ್ಷೆ ನಡೆಸಲು ಗುರುವಾರ ಸಂಜೆ 6 ರಿಂದ 9ರ ತನಕ ವಿಶೇಷ ಅಭಿಯಾನ ನಡೆಯಲಿದೆ.
- ಕೇಂದ್ರ ನಗರ ಪಾಲಿಕೆಯಲ್ಲಿ 1,87,085. ಪೂರ್ವ ನಗರ ಪಾಲಿಕೆಯಲ್ಲಿ 2,16,538. ಉತ್ತರ ನಗರ ಪಾಲಿಕೆಯಲ್ಲಿ 3,47,416. ದಕ್ಷಿಣ ನಗರ ಪಾಲಿಕೆಯಲ್ಲಿ 2,57,549 ಮತ್ತು ಪಶ್ಚಿಮ ನಗರ ಪಾಲಿಕೆಯಲ್ಲಿ 4,19,171 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ಈಗ ಸಮೀಕ್ಷೆಗೆ ಗೈರಾಗಿರುವ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ತಮಗೆ ವಹಿಸಿರುವ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಅನಧಿಕೃತವಾಗಿ ಗೈರಾದರೆ ಅಮಾನತು ಸೇರಿ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಸಿಬ್ಬಂದಿಯೇ ಹೊಣೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


