ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಘೋಷಣೆಯಾಗಿದೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಎನ್‌ಡಿಎ ಮೈತ್ರಿಕೂಟ 202 ಸೀಟುಗಳಲ್ಲಿ ಜಯಗಳಿಸಿದೆ. ಈ ಮೂಲಕ 5ನೇ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಚುನಾವಣೆಯ ಫಲಿತಾಂಶದಲ್ಲಿ ಹಲವು ಅಚ್ಚರಿಯ ಅಂಶಗಳಿವೆ. ಮಹಾಘಟಬಂಧನ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಮುಖಭಂಗ ಉಂಟು ಮಾಡಿದೆ.
ಬಿಹಾರದ 243 ಕ್ಷೇತ್ರದ ಮತ ಎಣಿಕೆ ಶುಕ್ರವಾರ ನಡೆಯಿತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122. ಅಂತಿಮ ಅಂಕಿ-ಅಂಶಗಳ ಪ್ರಕಾರ ಎನ್‌ಡಿಎ 202, ಮಹಾಘಟಬಂಧನ್ 34 ಮತ್ತು ಇತರರು 7 ಸೀಟುಗಳಲ್ಲಿ ಜಯಗಳಿಸಿದ್ದಾರೆ.
ಚುನಾವಣೆಯಲ್ಲಿ ಹಲವಾರು ಘಟಾನುಘಟಿ ನಾಯಕರು ಸೋತಿದ್ದಾರೆ. ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷ 25 ಸೀಟುಗಳನ್ನು ಗೆದ್ದಿದೆ. ಲಾಲೂ ಒಬ್ಬ ಹಿರಿಯ ಪುತ್ರ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಗೆಲುವು ಸಾಧಿಸಿದ್ದಾರೆ. ಕಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಹೀನಾಯ ಸೋಲು ಕಂಡಿದ್ದಾರೆ.
ದುರಂತ ನಾಯಕ ಲಾಲೂ ಪುತ್ರ: ತೇಜ್ ಪ್ರತಾಪ್ ಯಾದವ್ 16 ಏಪ್ರಿಲ್ 1988ರಲ್ಲಿ ಜನಿಸಿದರು. ಕುಟುಂಬದ ಎಲ್ಲರೂ ರಾಜಕೀಯ ನಾಯಕರೇ. ಚಿಕ್ಕವಯಸ್ಸಿಗೆ ಬಿಹಾರ ಸರ್ಕಾರದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ಸಂಪುಟ ದರ್ಜೆ ಸಚಿವರಾಗಿದ್ದರು.
ಆದರೆ ಕೆಲವು ವರ್ಷಗಳಿಂದ ತೇಜ್ ಪ್ರತಾಪ್ ಯಾದವ್ ಅದೃಷ್ಟ ಕೈಕೊಟ್ಟು ದುರಂತ ನಾಯಕರಾಗಿದ್ದಾರೆ. 2020ರ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಲ್ಲಿ ಆರ್‌ಜೆಡಿ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ತೇಜ್ ಪ್ರತಾಪ್ ಯಾದವ್ ಈ ಬಾರಿ ಸೋತಿದ್ದಾರೆ.
ಚುನಾವಣೆಯಲ್ಲಿ ಅವರು ಜೆಜೆಡಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದರು. 35,703 ಮತಗಳನ್ನು ಪಡೆದ ತೇಜ್ ಪ್ರತಾಪ್ ಯಾದವ್ ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷದ ಸಂಜಯ್ ಕುಮಾರ್ ಸಿಂಗ್ ವಿರುದ್ಧ 51,938 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ತೇಜ್ ಪ್ರತಾಪ್ ಯಾದವ್ ಕುಟುಂಬದಿಂದ ದೂರಾಗಿದ್ದಾರೆ. ಪತ್ನಿಯಿಂದ ವಿಚ್ಛೇಧನ ಪಡೆದಿದ್ದಾರೆ. ಆರ್‌ಜೆಡಿ ಪಕ್ಷವನ್ನು ಬಿಟ್ಟು ಚುನಾವಣೆ ಸಮಯದಲ್ಲಿ ಜನಶಕ್ತಿ ಜನತಾದಳ (ಜೆಜೆಡಿ) ಎಂಬ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷ ತಾನೇ ಎಂದು ಘೋಷಣೆ ಮಾಡಿದ್ದರು.
ಮಗನ ವರ್ತನೆ ಕಂಡು ಕೆರಳಿದ ಲಾಲೂ ಪ್ರಸಾದ್ ಯಾದವ್ 6 ವರ್ಷಗಳ ಕಾಲ ಅವರನ್ನು ಆರ್‌ಜೆಡಿಯಿಂದ ಉಚ್ಛಾಟನೆ ಮಾಡಿದ್ದಾರೆ. ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ಜೆಜೆಡಿ ಈ ಚುನಾವಣೆಯಲ್ಲಿ 21 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿತ್ತು. ಒಂದು ಸೀಟು ಸಹ ಗೆದ್ದಿಲ್ಲ, ಪಕ್ಷದ ಸಂಸ್ಥಾಪಕ ತೇಜ್ ಪ್ರತಾಪ್ ಯಾದವ್ ಸಹ ಹೀನಾಯ ಸೋಲು ಕಂಡಿದ್ದಾರೆ.
ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ ತೇಜ್ ಪ್ರತಾಪ್ ಯಾದವ್, “ಬಿಹಾರ ಉತ್ತಮವಾದ ಆಡಳಿತಕ್ಕೆ ಬದ್ಧವಾದ ಸರ್ಕಾರವನ್ನು ಆಯ್ಕೆ ಮಾಡಿದೆ. ತಾನು ಜನತೆಯ ಮಹಾ ತೀರ್ಪನ್ನು ಗೌರವಿಸುತ್ತೇನೆ. ಮಹುವಾ ಕ್ಷೇತ್ರದಲ್ಲಿ ಎನ್‌ಡಿಎ ಗೆಲುವು ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕತ್ವ, ನಿತೀಶ್ ಕುಮಾರ್ ಆಡಳಿತದಲ್ಲಿ ಜನರಿಗೆ ಇರುವ ನಂಬಿಕೆಗೆ ಸಾಕ್ಷಿ” ಎಂದು ಹೇಳಿದ್ದಾರೆ.
ಕುಟುಂಬದಿಂದ ದೂರವಾಗಿರುವ, ಹೊಸ ಪಕ್ಷ ಸ್ಥಾಪನೆ ಮಾಡಿರುವ ತೇಜ್ ಪ್ರತಾಪ್ ಯಾದವ್ ಮುಂದಿನ ನಡೆ ಏನು? ಎಂದು ಚರ್ಚೆಗಳು ಪ್ರಾರಂಭವಾಗಿದೆ. 2015ರಲ್ಲಿ ಶಾಸಕರಾಗಿದ್ದಾಗ ವಿಧಾನಸಭೆ ಅಧಿವೇಶನಕ್ಕೆ ಶ್ರೀ ಕೃಷ್ಣ, ಕೈಲಾಸದ ಶಿವನ ಮಾದರಿಯಲ್ಲಿ ವೇಷ ತೊಟ್ಟು ಬಂದು ತೇಜ್ ಪ್ರತಾಪ್ ಯಾದವ್ ಸದ್ದು, ಸುದ್ದಿ ಮಾಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


