ಉದ್ಯಾನ ನಗರಿ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ-2025ಕ್ಕೆ ಸಿದ್ಧವಾಗಿದೆ. ಐತಿಹಾಸಿಕವಾಗಿ ಮೊದಲ ಬಾರಿಗೆ 2 ದಿನಗಳ ಬದಲು 5 ದಿನಗಳಿಗೆ ಕಡಲೆಕಾಯಿ ಪರಿಷೆ ವಿಸ್ತರಣೆ ಮಾಡಲಾಗಿದೆ. ನವೆಂಬರ್ 17 ರಿಂದ 21ರ ತನಕ ಈ ಬಾರಿಯ ಕಡಲೆಕಾಯಿ ಪರಿಷೆ ನಡೆಯಲಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ.
ಕಡಲೆಕಾಯಿ ಪರಿಷೆ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದು, ನವೆಂಬರ್ 16 ರಿಂದ 21ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಆದೇಶದ ವಿವರ: ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ದೊಡ್ಡಬಸವಣ್ಣ ಮತ್ತು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಈ ವರ್ಷವೂ ಐತಿಹಾಸಿಕ ಕಡೆಲೆಕಾಯಿ ಪರಿಷೆ ಜಾತ್ರೆಯು 2025ರ ನವೆಂಬರ್ 16 ರಿಂದ 21ರ ತನಕ ನಡೆಯಲಿದೆ ಎಂದು ಆದೇಶ ಹೇಳಿದೆ.
ಈ ಜಾತ್ರೆಗೆ ಸಹಸ್ರಾರು ಮಂದಿ ಭಕ್ತಾಧಿಗಳು, ವ್ಯಾಪಾರಸ್ಥರುಗಳು, ಗಣ್ಯವ್ಯಕ್ತಿಗಳು ಆಗಮಿಸಲಿದ್ದಾರೆ. ಆದ ಕಾರಣ ಜಾತ್ರಾ ಮಹೋತ್ಸವಕ್ಕೆ ಬಂದು ಹೋಗುವ ಸಾರ್ವಜನಿಕರು/ ಗಣ್ಯ ವ್ಯಕ್ತಿಗಳು/ ಭಕ್ತಾಧಿಗಳು/ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಮತ್ತು ಪಾದಚಾರಿಗಳ ಸುರಕ್ಷಿತ ಓಡಾಟ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ, ವಾಹನಗಳ ನಿಲುಗಡೆಗಾಗಿ ಅನುಕೂಲ ಕಲ್ಪಿಸಿಕೊಡಲು ಠಾಣಾ ಸಾರ್ವಜನಿಕ ರಸ್ತೆಯಾದ ಬುಲ್‌ಟೆಂಪಲ್ ರಸ್ತೆಯಲ್ಲಿ ನವೆಂಬರ್ 16 ರಿಂದ 21ರ ತನಕ ಸಂಚಾರ 25 ಮಾರ್ಗಗಳನ್ನು ಬದಲಾವಣೆ ಮಾಡಿರುತ್ತದೆ ಎಂದು ತಿಳಿಸಿದೆ.
ಸಂಚಾರ ಮಾರ್ಗಗಳಲ್ಲಿ ಬದಲಾವಣೆ ವಿವರ
- ಲಾಲ್‌ಬಾಗ್ ವೆಸ್ಟ್ ಗೇಟ್ ಕಡೆಯಿಂದ ವಾಣಿವಿಲಾಸ್ ರಸ್ತೆಯ ಮುಖಾಂತರ ಮತ್ತು 5ನೇ ಮುಖ್ಯರಸ್ತೆ ಚಾಮರಾಜಪೇಟೆ ಹಾಗೂ ಗಾಂಧಿಬಜಾರ್ ಮುಖ್ಯರಸ್ತೆ ಕಡೆಯಿಂದ ಬುಲ್‌ಟೆಂಪಲ್ ಮುಖಾಂತರ ಹನುಮಂತ ನಗರದ ಕಡೆಗೆ ಸಂಚರಿಸುವ ವಾಹನಗಳು ಬುಲ್‌ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು, ಹಯವದನ ರಾವ್ ರಸ್ತೆಯಲ್ಲಿ ಸಾಗಿ, ಗವಿಪುರಂ 3ನೇ ಅಡ್ಡರಸ್ತೆಯ ಮೂಲಕ ಮುಂದೆ ಸಾಗಿ ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರಕ್ಕೆ ತೆರಳುವುದು.
- ಆರ್.ವಿ.ಟೀಚರ್ಸ್ ಕಾಲೇಜ್ ಜಂಕ್ಷನ್ ಕಡೆಯಿಂದ ಟ್ರಿನಿಟಿ ಆಸ್ಪತ್ರೆ ರಸ್ತೆ ಮತ್ತು ಕೆ.ಆರ್.ರಸ್ತೆಯಲ್ಲಿ ಬ್ಯೂಗಲ್ ರಾಕ್ ರಸ್ತೆ ಮೂಲಕ ಹನುಮಂತನಗರ ಕಡೆಗೆ ಹೋಗುವ ವಾಹನಗಳು ಠಾಗೋರ್ ಸರ್ಕಲ್ (ಮಾರುಕಟ್ಟೆ ರಸ್ತೆ-ಬ್ಯೂಗಲ್ ರಾಕ್ ರಸ್ತೆ ಜಂಕ್ಷನ್)ನಲ್ಲಿ ಬಲ ತಿರುವು ಪಡೆದು ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣ ಆಶ್ರಮ ಜಂಕ್ಷನ್ ಅಲ್ಲಿಂದ ಹಯವದನರಾವ್ ರಸ್ತೆಯಲ್ಲಿ ಗವಿಪುರಂ ಎಕ್ಸ್ ಟೆಂಕ್ಷನ್ 3ನೇ ಅಡ್ಡರಸ್ತೆಯಲ್ಲಿ ಮುಂದೆ ಸಾಗಿ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರಕ್ಕೆ ತೆರಳುವುದು.
- ತ್ಯಾಗರಾಜನಗರ/ ಬನಶಂಕರಿ ಕಡೆಯಿಂದ 5ನೇ ಮುಖ್ಯರಸ್ತೆ ಎನ್.ಆರ್.ಕಾಲೋನಿ ರಸ್ತೆಯಲ್ಲಿ ಬುಲ್‌ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಸಾಗುವ ವಾಹನಗಳು ಬುಲ್‌ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಆಶೋಕನಗರ 2ನೇ ಕ್ರಾಸ್ (ಬಿ.ಎಂ.ಎಸ್.ಕಾಲೇಜ್ ಹಾಸ್ಟೆಲ್ ರಸ್ತೆ) ರಸ್ತೆಯಲ್ಲಿ ಸಾಗಿ ಅಲ್ಲಿಂದ ಮುಂದೆ ಕತ್ರಿಗುಪ್ಪೆ ರಸ್ತೆಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು 3ನೇ ಮುಖ್ಯರಸ್ತೆ ಮೂಲಕ ನಾರಾಯಣಸ್ವಾಮಿ ಸರ್ಕಲ್‌ನಲ್ಲಿ ಕೆ.ಜಿ.ನಗರ ಮುಖ್ಯರಸ್ತೆ ಅಥವಾ ಹಯವದನ ರಾವ್ ರಸ್ತೆಯಲ್ಲಿ ಸಾಗಿ ರಾಮಕೃಷ್ಣ ಆಶ್ರಮ ಜಂಕ್ಷನ್ ಮೂಲಕ ಚಾಮರಾಜಪೇಟೆ ಕಡೆಗೆ ಸಾಗಬಹುದಾಗಿದೆ.
ವಾಹನಗಳಿಗೆ ಪಾರ್ಕಿಂಗ್ ಕಲ್ಪಿಸಿರುವ ಸ್ಥಳಗಳು: ಎನ್.ಆರ್.ಕಾಲೋನಿಯ ಎ.ಪಿ.ಎಸ್ ಕಾಲೆಜ್ ಆಟದ ಮೈದಾನ, ಬುಲ್ ಟೆಂಪಲ್ ರಸ್ತೆಯಲ್ಲಿರುವ ಉದಯಭಾನು ಕಲ್ಯಾಣ ಮಂಟಪ(ಮೋರ್ ಮಾಲ್ ಹತ್ತಿರ), ನ್ಯಾಷನಲ್ ಕಾಲೇಜು ಆಟದ ಮೈದಾನ, ಹಯವದನರಾವ್ ರಸ್ತೆಯಲ್ಲಿರುವ ಕೊಹಿನೂರ್ ಆಟದ ಮೈದಾನ ಮತ್ತು ಶೃಂಗೇರಿ ಶಾರದಾ ಪೀಠ ಕಲ್ಯಾಣ ಮಂಟಪ ಮೈದಾನ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


