ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತನ್ನ ಸಿಬ್ಬಂದಿಗೆ ಬಂಪರ್ ಕೊಡುಗೆ ನೀಡಿದೆ. ಈ ಕುರಿತು ಅಕ್ರಂಪಾಷ, ವ್ಯವಸ್ಥಾಪಕ ನಿರ್ದೇಶಕರು ಕ.ರಾ.ರ.ಸಾ.ನಿಗಮ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಹೊಸ ಸುತ್ತೋಲೆಯು 1/1/2026 ರಿಂದ ಜಾರಿಗೆ ಬರದಲಿದೆ ಎಂದು ಹೇಳಿದ್ದಾರೆ.
ಈ ಸುತ್ತೋಲೆಯು ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗಳಿಗೆ ಮಾಸಿಕ ಭತ್ಯೆ ಮತ್ತು ನಗದು ಪುರಸ್ಕಾರವನ್ನು ಪರಿಷ್ಕರಿಸಿರುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. 16/09/2025ರಂದು ನಡೆದ 32ನೇ ಕರಾರಸಾನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ನ್ಯಾಸ ಮಂಡಳಿ ಸಭೆಯ ನಡವಳಿ ಉಲ್ಲೇಖ ಮಾಡಲಾಗಿದೆ.
ಸುತ್ತೋಲೆಯ ವಿವರಗಳು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗಮದ ವಾಹನಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ಅಪಘಾತ ರಹಿತ ಚಾಲನೆಯ ಪ್ರವೃತ್ತಿಯನ್ನು ಹೊಂದಿರುವ ಚಾಲಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಪಘಾತ ಮುಕ್ತ ಚಾಲನೆಗೆ ಪ್ರೇರೆಪಿಸುವ ಸಲುವಾಗಿ ಅಪಘಾತರಹಿತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿರುವ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ವಿತರಿಸುವ ಜೊತೆಗೆ ಪ್ರಶಂಸನಾ ಪತ್ರದೊಂದಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ನಂತರ ಪದಕ ಪಡೆದ ಚಾಲಕರಿಗೆ ಪ್ರತಿ ತಿಂಗಳು ಮಾಸಿಕ ಭತ್ಯೆಯನ್ನು ನೀಡಲಾಗುತ್ತಿದೆ.
ಮುಂದುವರೆದು, ಮುಖ್ಯ ಮಂತ್ರಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ಚಾಲಕರಿಗೆ ಪಶಂಸನಾ ಪತ್ರದೊಂದಿಗೆ ನೀಡುತ್ತಿದ್ದ ನಗದು ಪುರಸ್ಕಾರ ಮತ್ತು ಪ್ರತಿ ತಿಂಗಳು ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ದಿನಾಂಕ 16.09.2025 ರಂದು ಜರುಗಿದ 32ನೇ ಕರಾರಸಾನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ನ್ಯಾಸ ಮಂಡಳಿ ಸಭೆಯ ನಿರ್ಣಯದಂತೆ ಪರಿಷ್ಕರಿಸಲಾಗಿದೆ.
* ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಅರ್ಹರಾದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುವ ನಗದು ಪುರಸ್ಕಾರವನ್ನು ರೂ.5,000ಗಳನ್ನು ಪರಿಷ್ಕರಿಸಿ ರೂ.10,000 ನಿಗದಿಪಡಿಸಲಾಗಿದೆ.
* ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುತ್ತಿದ್ದ ಮಾಸಿಕ ಭತ್ಯೆ ರೂ.500 ಗಳನ್ನು ಪರಿಷ್ಕರಿಸಿ ರೂ.1,000 ನಿಗದಿಪಡಿಸಲಾಗಿದೆ.
* ಬೆಳ್ಳಿ ಪದಕಕ್ಕೆ ಅರ್ಹರಾದ ಚಾಲಕರಿಗೆ ನೀಡುವ ನಗದು ಪುರಸ್ಕಾರವನ್ನು ರೂ. 2,500 ಗಳನ್ನು ಪರಿಷ್ಕರಿಸಿ ರೂ.5,000 ನಿಗದಿಪಡಿಸಲಾಗಿದೆ.
* ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ರೂ.250 ಗಳನ್ನು ಪರಿಷ್ಕರಿಸಿ ರೂ.500ನಿಗದಿಪಡಿಸಲಾಗಿದೆ.
* ಪರಿಷ್ಕರಿಸಿರುವ ನಗದು ಪುರಸ್ಕಾರವನ್ನು 01/01/2026 ಮತ್ತು ನಂತರ ನಡೆಯುವ ಬೆಳ್ಳಿ ಮತ್ತು ಚಿನ್ನದ ಪದಕ ಸಮಾರಂಭದಲ್ಲಿ ಪದಕ ಪಡೆಯುವ ಚಾಲಕರಿಗೆ ನೀಡುವುದು.
* ಹೆಚ್ಚಿಸಿರುವ ಮಾಸಿಕ ಭತ್ಯೆಯನ್ನು ಈಗ ಮಾಸಿಕ ಭತ್ಯೆ ಪಡೆಯುತ್ತಿರುವ ಚಾಲಕರಿಗೆ ಜನವರಿ 2026ರ ಮಾಹೆಯಿಂದ ನೀಡುವುದು.
* ಮುಂದಿನ ವರ್ಷಗಳಲ್ಲಿ ಪದಕಕ್ಕೆ ಅರ್ಹಗೊಂಡ ವರ್ಷದಿಂದಲೇ ಮಾಸಿಕ ಭತ್ಯೆಯನ್ನು ನೀಡುವುದು. (ಉದಾ: 2025 ನೇ ಸಾಲಿನಲ್ಲಿ ಪದಕಕ್ಕೆ ಅರ್ಹಗೊಂಡಲ್ಲಿ 2026 ನೇ ಜನವರಿಯಿಂದ ಪ್ರೋತ್ಸಾಹ ಧನ ನೀಡಲು ಅರ್ಹಗೊಳಿಸುವುದು)
ಮಾಸಿಕ ಭತ್ಯೆಯನ್ನು ನೀಡುವಾಗ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ತಿಳಿಸಿರುವ ಎಲ್ಲಾ ಕ್ರಮಗಳನ್ನು ಅನುಸರಿಸುವುದು. ಇನ್ನುಳಿದಂತೆ ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸುತ್ತೋಲೆ ತಿಳಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


