ಹಾಸನ: ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿನ್ನೆ ( ಏಪ್ರಿಲ್ 15 ) ರಾತ್ರಿ ಅಂಗಡಿಗೆ ಹೋಗಲು ರಸ್ತೆ ದಾಟುವಾಗ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಹಲಸುಲಿಗೆ ಗ್ರಾಮದ ಗುಲಾಬಿ (32) ಎಂಬುವವರು ಮೃತಪಟ್ಟ ಮಹಿಳೆ. ಗುಲಾಬಿ ತನ್ನ ಮಕ್ಕಳು ಅಳುತ್ತಿದ್ದ ಕಾರಣ ಅವರನ್ನು ಸಮಾಧಾನ ಮಾಡಲು ಚಾಕೊಲೆಟ್ ಮತ್ತು ಬಿಸ್ಕೆಟ್ ತರಲು ಡಿವೈಡರ್ ದಾಟಿ ಹೆದ್ದಾರಿ ಬದಿಯ ಅಂಗಡಿಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ KA-05-AH-0576 ನೋಂದಣಿ ಸಂಖ್ಯೆಯ ಇನ್ನೊವಾ ಕಾರು ಗುಲಾಬಿ ಅವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಹಿಳೆ ಹಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಸಂಭವಿಸಿದರೂ ಡಿಕ್ಕಿ ಹೊಡೆದ ಕಾರು ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿ ಅಮಾನವೀಯ ವರ್ತನೆ ತೋರಿದ್ದಾನೆ.
ಈ ದುರ್ಘಟನೆಯ ಭಯಾನಕ ದೃಶ್ಯ ಹೆದ್ದಾರಿ ಬದಿಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ತನಿಖೆಗೆ ಸಹಕಾರಿಯಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


