ಬೆಂಗಳೂರು: ವೃಕ್ಷಮಾತೆ ಎಂದೇ ಖ್ಯಾತಿಯನ್ನು ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರ ಬಯೋಪಿಕ್ ಚಿತ್ರ ಸೆಟ್ಟೇರಲಿದೆ ಎಂದು ಸುದ್ದಿಗಳು ಹರಿದಾಡಿದ್ದವು ಹಾಗೂ ಸಿದ್ಧತೆಗಳೂ ಸಹ ನಡೆದಿದ್ದವು.
ಶ್ರೀ ಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʼವೃಕ್ಷಮಾತೆʼ ಎಂಬ ಶೀರ್ಷಿಕೆಯಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲು ದಿಲೀಪ್ ಕುಮಾರ್ ಎಚ್‌ಆರ್, ಸೌಜನ್ಯ ಡಿವಿ ಹಾಗೂ ಎ ಸಂತೋಷ್ ಮುರಳಿ ಮುಂದಾಗಿದ್ದು, ಒರಟ ಶ್ರೀ ನಿರ್ದೇಶನ ಮಾಡುತ್ತಿದ್ದಾರೆ.
ಸಿದ್ದೇಶ್ ಅವರು ಬರೆದಿರುವ ʼವೃಕ್ಷಮಾತೆ ಸಾಲುಮರದ ತಿಮ್ಮಕ್ಕʼ ಎಂಬ ಪುಸ್ತಕರ ಆಧಾರದ ಮೇಲೆ ಈ ಚಿತ್ರವನ್ನು ಮಾಡಲಾಗುತ್ತಿದ್ದು, ಫಿಲ್ಮ್ ಚೇಂಬರ್‌ನಲ್ಲಿ ಟೈಟಲ್ ರಿಜಿಸ್ಟರ್ ಸಹ ಆಗಿದೆ ಎನ್ನಲಾಗಿತ್ತು. ಆದರೆ ಇದೀಗ ಇದು ವಿವಾದಕ್ಕೆ ತಿರುಗಿದ್ದು, ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಈ ಚಿತ್ರಕ್ಕೆ ಅಡ್ಡಿಯುಂಟುಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಚಿತ್ರ ಮಾಡಬೇಕೆಂದರೆ ತಮಗೊಂದು ಇನ್ನೋವಾ ಕಾರು ಹಾಗೂ 25 ಲಕ್ಷ ರೂ ಹಣವನ್ನು ನೀಡಬೇಕೆಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದು, ಚಿತ್ರೀಕರಣಕ್ಕೆ ಅನುಮತಿ ನೀಡದಂತೆ ತಡೆ ಹಿಡಿದಿದ್ದಾರೆ. ಜತೆಗೆ ಸಾಲು ಮರದ ತಿಮ್ಮಕ್ಕ ಸಹ ಆಗಮಿಸಿದ್ದಾರೆ.
ಈ ಕುರಿತು ಮಾತನಾಡಿದ ಉಮೇಶ್ ಚಿತ್ರೀಕರಣ ಮಾಡಲು ತಮ್ಮ ಒಪ್ಪಿಗೆ ಇಲ್ಲ ಎಂದರು. ಸಾಲು ಮರದ ತಿಮ್ಮಕ್ಕ ಅವರ ಬಯೋಪಿಕ್ ಆಗುವುದು ಒಂದೇ ಸಾರಿ, ನಮಗೆ ಸೂಕ್ತವೆನಿಸಿದ ನಿರ್ದೇಶಕರು ಸಿಕ್ಕಿ, ಅವರು ನಮಗೆ ಸರಿ ಎನಿಸಿದರೆ ಒಪ್ಪಿಗೆ ಕೊಡ್ತೀವಿ, ಅದೂ ಆಗಲಿಲ್ಲವೆಂದರೆ ಸಾಲು ಮರದ ತಿಮ್ಮಕ್ಕ ಅವರ ಫೌಂಡೇಷನ್ ಮೂಲಕವೇ ಚಿತ್ರ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಇವರಿಗೆ ಅವಕಾಶ ಕೊಡುವುದಿಲ್ಲ ಎಂದರು.
ಅಲ್ಲದೇ ಚಿತ್ರಕ್ಕೆ ಒಪ್ಪಿಗೆ ಸೂಚಿಸಲು 25 ಲಕ್ಷ ಹಣ ಹಾಗೂ ಇನ್ನೋವಾ ಕಾರನ್ನು ಕೊಡಬೇಕೆಂದು ಕೇಳಿರುವುದಾಗಿ ಮಾಡಿದ ಆರೋಪಕ್ಕೆ ಸ್ಪಂದಿಸಿದ ಉಮೇಶ್ ಅದೆಲ್ಲ ಸುಳ್ಳು ಈಗಾಗಲೇ ನಮ್ಮ ವಕೀಲರ ಜೊತೆ ಮಾತನಾಡಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


