ಮೈಸೂರು: ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದ ಸೂಪರ್ ಸಿಎಂ ಎಂಬ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿರುವ ವಿಚಾರಕ್ಕೆ ಸಚಿವ ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಸೂಪರ್ ಸಿಎಂಗಳು ಇಲ್ಲ. ರಾಜ್ಯದಲ್ಲಿ ಇರುವುದು ಒಬ್ಬರೇ, ಸಿಎಂ ಅದು ಸಿದ್ದರಾಮಯ್ಯ.
ನಮ್ಮಲ್ಲಿ ಅಸಂವಿಧಾನಿಕವಾದ ಯಾವ ಹುದ್ದೆಗಳು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್‌ಗೆ ಕಿಡಿಕಾರಿದರು.
ಇನ್ನು ಸಚಿವರನ್ನ ಪ್ರತ್ಯೇಕವಾಗಿ ಕರೆದು ರಣದೀಪ್ ಸಿಂಗ್ ಸುರ್ಜೇವಾಲಾ ಸಭೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುರ್ಜೇವಾಲಾ ನಮ್ಮ ರಾಜ್ಯದ ಉಸ್ತುವಾರಿ. ಸಭೆ ಕರೆಯಲು ಅವರಿಗೆ ಎಲ್ಲಾ ರೀತಿಯ ಹಕ್ಕಿದೆ. ಹೀಗಾಗಿ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಯಾವ ತಪ್ಪು ಇಲ್ಲ. ಯಾವ ಸಚಿವರು ಸಹ ಈ ಸಭೆಗೆ ವಿರೋಧ ವ್ಯಕ್ತಪಡಿಸಿಲ್ಲ.
ನನ್ನನ್ನು ಸಭೆಗೆ ಕರೆದಿದ್ದರು. ನಾನು ಇಂಡಿ ಕಾರ್ಯಕ್ರಮ ಮುಗಿಸಿ ಆ ನಂತರ ಭೇಟಿಯಾಗಿ ಮಾತನಾಡಿದೆ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸಿಗಂದೂರು ಸೇತುವೆ ಉದ್ಘಾಟನೆ ಕುರಿತು ಮಾತನಾಡಿದ ಅವರು, ಸಿಗಂದೂರು ಸೇತುವೆ ನಿರ್ಮಾಣ ನಮ್ಮ ಮೊದಲ ಅವಧಿಯ ಸರ್ಕಾರದ ಯೋಜನೆ. ಕಳೆದ 2013ರಲ್ಲಿ ನಾವೇ ಈ ಸೇತುವೆ ಯೋಜನೆಗೆ ಕಾರ್ಯಸೂಚಿ ಸಿದ್ಧ ಮಾಡಿದ್ದೆವು. ಒಟ್ಟಾರೆ ಪ್ಲಾನ್ ಕೂಡ ತಯಾರು ಮಾಡಿದ್ದೆವು. ಯಡಿಯೂರಪ್ಪ ಅವರೇ ನನಗೆ ಕರೆ ಮಾಡಿ ಮಹದೇವಣ್ಣ ಈ ಬ್ರಿಡ್ಜ್ ಮಾಡಿಕೊಡು ಎಂದು ಪ್ರೀತಿಯಿಂದ ಹೇಳಿದ್ದರು. ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಹ ಮಹದೇವಪ್ಪ ಈ ಬ್ರಿಡ್ಜ್ ಮಾಡು ಎಂದು ಹೇಳಿದ್ದರು. ಹೀಗಾಗಿ ಸೇತುವೆ ಕಾರ್ಯ ಯೋಜನೆ ಮಾಡಿದ್ದೇವೆ. ಯೋಜನೆಗೆ ಹಣ ಜಾಸ್ತಿಯಾದ ಕಾರಣ ಅದನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಯಿತು. ನಾನು ಯಾವತ್ತು ಇದು ನಮ್ಮ ಯೋಜನೆ ಎಂದು ಹೇಳಿಕೊಂಡಿಲ್ಲ. ಬಿಜೆಪಿಯವರು ಹೇಳುತ್ತಿರುವುದಕ್ಕೆ ಇಂದು ನಾನು ಹೇಳಿದೆ ಅಷ್ಟೇ. ಇದು ಕಾಂಗ್ರೆಸ್ ಸರ್ಕಾರದ ಯೋಜನೆ ಅನ್ನುವುದರಲ್ಲಿ ಯಾವ ಅನುಮಾನಗಳು ಬೇಡ. ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾಯಕರು ಅಲ್ಲಿ ಇದ್ದಿದ್ದರೇ ಅದರ ಬೆರಗು ಹೆಚ್ಚಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ಸಂಘರ್ಷಕ್ಕೆ ಕೇಂದ್ರ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣ: ಮಾಜಿ ಸಚಿವ ಬೈರತಿ ಬಸವರಾಜ್ ವಿರುದ್ಧ ಎಫ್‌ಐಆರ್
ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


