ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಅಲಾಸ್ಕಾದಲ್ಲಿ ಭೇಟಿಯಾದರು. ಉಭಯ ನಾಯಕರು ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಕುರಿತು ಮಾತುಕತೆ ನಡೆದಿದೆ.
ಅಮೆರಿಕದಲ್ಲಿ ಪುಟಿನ್ಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಎಲ್ಮೆಂಡಾರ್ಫ್-ರಿಚರ್ಡ್ಸನ್ ಜಂಟಿ ನೆಲೆಯಲ್ಲಿ ಕೆಂಪು ಕಾರ್ಪೆಟ್ ಹಾಸಲಾಗಿತ್ತು. ಸಭೆಯು ಅಮೆರಿಕದ ಅಲಾಸ್ಕಾದ ಆಂಕಾರೇಜ್ನಲ್ಲಿ ನಡೆಯಿತು. ಈ ವೇಳೆ ಎರಡೂ ದೇಶಗಳ ನಿಯೋಗಗಳು ಉಪಸ್ಥಿತರಿದ್ದವು. ಇಬ್ಬರು ನಾಯಕರು ಉನ್ನತ ಸಲಹೆಗಾರರೊಂದಿಗೆ ತ್ರಿ-ಆನ್-ತ್ರಿ ಮಾದರಿಯಲ್ಲಿ ಭೇಟಿಯಾದರು. ಅಧ್ಯಕ್ಷ ಪುಟಿನ್ ಅವರನ್ನು ಬಿ-2 ಬಾಂಬರ್ ವಿಮಾನದೊಂದಿಗೆ ಸ್ವಾಗತಿಸಲಾಯಿತು. ಪುಟಿನ್ ರೆಡ್ ಕಾರ್ಪೆಟ್ ಮೇಲೆ ಬಂದ ತಕ್ಷಣ ಟ್ರಂಪ್ ಚಪ್ಪಾಳೆ ತಟ್ಟಿದರು. ಇದಕ್ಕೂ ಮೊದಲು ಟ್ರಂಪ್ ಸುಮಾರು ಅರ್ಧ ಗಂಟೆ ವಿಮಾನದಲ್ಲಿ ಕುಳಿತು ಪುಟಿನ್ಗಾಗಿ ಕಾಯುತ್ತಿದ್ದರು.
ಎಲ್ಮೆಂಡಾರ್ಫ್-ರಿಚರ್ಡ್ಸನ್ ಮಿಲಿಟರಿ ನೆಲೆಯಲ್ಲಿ ನಡೆದ ಈ ಮುಚ್ಚಿದ ಬಾಗಿಲಿನ ಸಭೆ ಸುಮಾರು 2 ಗಂಟೆ 45 ನಿಮಿಷ ನಡೆಯಿತು. ಸಭೆಯ ನಂತರ ಟ್ರಂಪ್ “ಮಾತುಕತೆ ಫಲಪ್ರದ, ಕೆಲವು ಅಡೆತಡೆಗಳಿದ್ದರೂ ಶಾಂತಿಯತ್ತ ಹೆಜ್ಜೆಯಾಗಿದೆ” ಎಂದು ಹೇಳಿದರು.
ಉಕ್ರೇನ್ನಲ್ಲಿ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ತಾವು ಮತ್ತು ವ್ಲಾಡಿಮಿರ್ ಪುಟಿನ್ ಅವರು “ಒಪ್ಪಂದ”ಕ್ಕೆ ಬಂದಿದ್ದೇವೆ ಎಂದು ಪುಟಿನ್ ಹೇಳಿದ್ದರೂ, ಸಭೆಯ ನಂತರ ಯಾವುದೇ ಒಪ್ಪಂದಕ್ಕೆ ಬರಲಿಲ್ಲ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. ಇದು ಗೊಂದಲವನ್ನಂಟು ಮಾಡಿದೆ.
ಪುಟಿನ್, ‘ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ’ ಎಂದು ಖಚಿತಪಡಿಸಿದ್ದಾರೆ.
‘ಮಾತುಕತೆಯು ಶಾಶ್ವತ ಹಾಗೂ ದೀರ್ಘಕಾಲೀನವಾಗಿಸಬೇಕಾದರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕಿದೆ ಎಂಬುದು ನಮಗೆ ಮನವರಿಕೆಯಾಗಿದೆ’ ಎಂದಿದ್ದಾರೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಪುನರುಚ್ಚರಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ತಮ್ಮ ಮುಂದಿನ ಸಭೆ ಮಾಸ್ಕೋದಲ್ಲಿ ನಡೆಯಬಹುದು. ಇನ್ನು ಮಾತುಕತೆ ಬಳಿಕ ಉಕ್ರೇನ್ನ ಕೀವ್ನಲ್ಲಿ ಶಾಂತಿ ನೆಲಸಬಹುದು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.ವಾಷಿಂಗ್ಟನ್ ಡಿಸಿಯಿಂದ ಏರ್ಫೋರ್ಸ್ ಒನ್ ವಿಮಾನದಲ್ಲಿ ಅಲಾಸ್ಕಾದತ್ತ ಹೊರಡುವ ಮುನ್ನ ಮಾತನಾಡಿದ ಟ್ರಂಪ್, ”ಪುಟಿನ್ ಅವರು ನಮ್ಮ ಆರ್ಥಿಕ ನೀತಿ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮಾತುಕತೆಗಳು ಫಲಪ್ರದವಾದರೆ ರಷ್ಯಾ ಜತೆಗೆ ಮತ್ತಷ್ಟು ವ್ಯಾಪಾರದ ಮಾತುಕತೆಗೆ ಅಮೆರಿಕ ಮುಂದಾಗಲಿದೆ ” ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


