ಬೆಂಗಳೂರು: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸ್ವಾರ್ಥಪರ ಗುಂಪುಗಳು ನಡೆಸುತ್ತಿರುವ ಈ ನಿರಾಧಾರ ಅಪಪ್ರಚಾರದಿಂದ ಕರ್ನಾಟಕದ ಕೋಟ್ಯಾಂತರ ಧರ್ಮಸ್ಥಳ ಭಕ್ತರ ಧಾರ್ಮಿಕ ಭಾವನೆಗಳು ತೀವ್ರವಾಗಿ ಗಾಯಗೊಂಡಿವೆ. ಜನರಲ್ಲಿ ಈಗಾಗಲೇ ಆಕ್ರೋಶ ಮತ್ತು ಅಸಮಾಧಾನ ತೀವ್ರವಾಗಿದೆ ಎಂದು ಎಚ್ಚರಿಸಿದ್ದಾರೆ.
ದುರಾದೃಷ್ಟವಶಾತ್, ಧರ್ಮಸ್ಥಳದ ಭಕ್ತರು ಮತ್ತು ಸ್ವಯಂಘೋಷಿತ ಸಮಾಜ ಸುಧಾರಕರ ನಡುವೆ ಘರ್ಷಣೆ ಉಂಟಾದರೆ ಅದರ ಪರಿಣಾಮಗಳು ಊಹಿಸಲಾಗದಷ್ಟು ಭಯಾನಕವಾಗಿರುತ್ತವೆ. ಇಂತಹ ಭೀಕರ ಪರಿಸ್ಥಿತಿ ಉಂಟಾದರೆ ಸರ್ಕಾರವೇ ಅದಕ್ಕೆ ಹೊಣೆ ಹೊರಬೇಕೆಂದು ಆಗ್ರಹಿಸಿದ್ದಾರೆ.
ಸೌಜನ್ಯಾ ಪ್ರಕರಣಕ್ಕೆ ನ್ಯಾಯ ದೊರೆಯುವ ನಿರೀಕ್ಷೆಯೊಂದಿಗೆ ಬಿಜೆಪಿಯು ಎಚ್ಚರಿಕೆಯಿಂದ ಕೂಡಿದ ಆತವಿಶ್ವಾಸದಿಂದಲೇ ಎಸ್‍ಐಟಿ ತನಿಖೆಯನ್ನು ಸ್ವಾಗತಿಸಿತ್ತು ಎಂದು ಹೇಳಿದ್ದಾರೆ.
ತನಿಖೆ ಪ್ರತಿದಿನವೂ ಅನಾವಶ್ಯಕ ಮತ್ತು ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಮುಖವಾಡ ಧರಿಸಿದ ವ್ಯಕ್ತಿಯ ಗುರುತನ್ನು ಪೋಲೀಸರು ಇನ್ನೂ ಬಹಿರಂಗಪಡಿಸಿಲ್ಲ, ಅವನನ್ನು ಯಾವುದೇ ಪರೀಕ್ಷೆಗೆ ಒಳಪಡಿಸಿರುವುದೂ ಇಲ್ಲ. ಈ ತನಿಖೆ ದಿನದಿಂದ ದಿನಕ್ಕೆ ರಹಸ್ಯದಿಂದ ಕೂಡಿರುವ ಮರ್ಮದಂತೆ ಗೋಚರಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಅಸ್ಪಷ್ಟತೆ ಅಂಗೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಎಸ್‍ಐಟಿ ತನಿಖೆಯ ಮಧ್ಯಂತರ ವರದಿಯನ್ನು ಎರಡೂ ಸದನಗಳಲ್ಲಿ ಮಂಡಿಸುವಂತೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್‍ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ತೀವ್ರವಾಗಿ ವ್ಯಕ್ತವಾಗುತ್ತಿರುವ ಜನರ ಆಕ್ರೋಶವನ್ನು ಶಮನಗೊಳಿಸಲು ಮಧ್ಯಂತರ ವರದಿ ನೀಡುವುದು ಅಗತ್ಯವಾಗಿದೆ. ಜೊತೆಗೆ, ತನಿಖೆಯನ್ನು ಪೂರ್ಣಗೊlಳಿಸಲು ಎಸ್‍ಐಟಿಗೆ ಸರ್ಕಾರವು ಸ್ಪಷ್ಟ ಗಡುವನ್ನು ನಿಗದಿಪಡಿಸಬೇಕು. ಇದು ಅನಂತ ಕಾಲ ಮುಂದುವರಿಯುವಂತಿಲ್ಲ ಎಂದು ರವಿಕುಮಾರ್ ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ.
24 ಗಂಟೆಯಲ್ಲಿ ತುರ್ತು ಬಿಪಿಎಲ್ ಕಾರ್ಡ್: ರಾಜ್ಯ ಸರ್ಕಾರದ ಹೊಸ ಪೋರ್ಟಲ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


